ಕಾವೇರಿ ವಿವಾದ, ಕರ್ನಾಟಕ ಬಂದ್, ವಿಮಾನ ನಿಲ್ದಾಣ ಮುತ್ತಿಗೆಗೆ ಯತ್ನ, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು…..!

Follow Us :

ಕರ್ನಾಟಕ ರಾಜ್ಯದಲ್ಲಿ ಕಾವೇರಿ ನೀರಿಗಾಗಿ ಹೋರಾಟ ಜೋರಾಗಿದ್ದು, ರಾಜ್ಯದಾದ್ಯಂತ ಅನೇಕ ಕಡೆ ಕರ್ನಾಟಕ ಬಂದ್ ಜೋರಾಗಿಯೇ ನಡೆಯುತ್ತಿದೆ. ತಮಿಳು ನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ರೈತಪರ ಹಾಗೂ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ನಡೆಸುತ್ತಿವೆ. ಬೆಳಗಿನಿಂದಲೇ ರಾಜ್ಯದ ಹಲವು ಕಡೆ ಜೋರಾದ ಪ್ರತಿಭಟನೆ ಶುರುವಾಗಿದೆ. ಬೆಂಗಳೂರಿನಲ್ಲೂ ಸಹ ಕಾವೇರಿಯ ಕಿಚ್ಚು ಜೊರಾಗಿದ್ದು, ಕೆಲ ಪ್ರತಿಭಟನಾಕಾರರು ಕೆಂಪೇಗೌಡ ವಿಮಾನ ನಿಲ್ದಾಣವನ್ನು ಮುತ್ತಿಗೆ ಹಾಕಲು ಯತ್ನಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕಳೆದೆರಡು ದಿನಗಳ ಹಿಂದೆಯಷ್ಟೆ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದೆಂದು ಆಗ್ರಹಿಸಿ ಬೆಂಗಳೂರ ಬಂದ್ ಸಹ ನಡೆಸಲಾಗಿತ್ತು. ಈ ಬಗ್ಗೆ ಸರ್ಕಾರ ಕ್ರಮ ವಹಿಸದ ಕಾರಣದ ಸೆ.29 ಶುಕ್ರವಾರ ಇಡೀ ಕರ್ನಾಟಕ ಬಂದ್ ನಡೆಸಲು ಕನ್ನಡಪರ ಸಂಘಟನೆಗಳು ಹಾಗೂ ರೈತಪರ ಸಂಘಟನೆಗಳು ತೀರ್ಮಾನ ತೆಗೆದುಕೊಂಡಿದ್ದರು. ಅದರಂತೆ ರಾಜ್ಯದಾದ್ಯಂತ ಕಾವೇರಿ ನೀರಿಗಾಗಿ ಹೋರಾಟ ಜೋರಾಗಿದೆ. ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ದೇವನಹಳ್ಳಿ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನುಗ್ಗಿ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಟರ್ಮಿನಲ್ 1 ನಿರ್ಗಮನ ಗೇಟ್ ನಲ್ಲಿ ಮುತ್ತಿಗೆ ಹಾಕಲು ಯತ್ನಿಸಿದ್ದು, ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನೂ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿಮಾನ ನಿಲ್ದಾಣದ ಆಗಮನದ ಗೇಟ್ ಬಳಿ ಕನ್ನಡ ಭಾವುಟಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸದಂತೆ ಆಗ್ರಹಿಸಿದ್ದಾರೆ. ಇನ್ನೂಕರವೇ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಈ ಸಮಯದಲ್ಲಿ 20 ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಸಹ ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.