News

ಪತ್ನಿಯ ಶೀಲ ಶಂಕಿಸಿ 12 ವರ್ಷಗಳಿಂದ ಆಕೆಯನ್ನು ಗೃಹ ಬಂಧನದಲ್ಲಿಟ್ಟ ಪತಿರಾಯ, ಪ್ರಕರಣ ದಾಖಲು…..!

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲೂಕಿನ ಹೆಚ್.ಮಟಕೆರೆ ಎಂಬ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬರೋಬ್ಬರಿ 12 ವರ್ಷಗಳ ಕಾಲ ಗೃಹ ಬಂಧನಲ್ಲಿಟ್ಟಿರುವ ಘಟನೆಯೊಂದು ನಡೆದಿದೆ. ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಸುಮಾರು 12 ವರ್ಷಗಳಿಂದ ಗೃಹ ಬಂಧನಲ್ಲಿಟ್ಟಿದ್ದಾನೆ. ಸಣ್ಣಾಲಯ್ಯ ಎಂಬಾತನೇ ಈ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ತನ್ನ ಮನೆಗೆ ಮೂರು ಬೀಗ ಹಾಕಿ ಪತ್ನಿಯನ್ನು ಮನೆಯಲ್ಲಿಯೇ ಬಂಧನ ಮಾಡಿದ್ದು, ಈ ಸಂಬಂಧ ಹೆಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಈ ಸುದ್ದಿಯ ಬಗ್ಗೆ ಮಾಹಿತಿ ಪಡೆದುಕೊಂಡ ವಕೀಲ ಸಿದ್ದಪ್ಪಾಜಿ, ಸಾಂತ್ವನ ಕೇಂದ್ರದ ಜಯಶೀಲ ಹಾಗೂ ಎ.ಎಸ್.ಐ ಸುಭಾನ್ ಹಾಗೂ ಅಧಿಕಾರಿಗಳ ತಂಡ ಜಂಟಿಯಾಗಿ ಸಂತ್ರಸ್ತೆಯಿದ್ದ ಮನೆ ಬೀಗ ಮುರಿದು ಪರಿಶೀಲನೆ ನಡೆಸಿದ್ದಾರೆ. ಬಳಿಕ ರಾತ್ರೋರಾತ್ರಿ ಸಂತ್ರಸ್ತೆ ಹಾಗೂ ಆಕೆಯ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಮಹಿಳೆಯ ಒಪ್ಪಿಗೆ ಪಡೆದು ಆಕೆಯನ್ನು ತವರು ಮನೆಯಲ್ಲಿ ಬಿಟ್ಟಿದ್ದಾರೆ. ಇನ್ನೂ ಆರೋಪಿ ಸಣ್ಣಾಲಯ್ಯನಿಗೆ ಸಂತ್ರಸ್ತೆ ಮಹಿಳೆ ಮೂರನೇ ಪತ್ನಿಯಾಗಿದ್ದಾಳೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಆತನ ಮೊದಲ ಇಬ್ಬರೂ ಪತ್ನಿಯರು ಆತನ ಕಿರುಕುಳಕ್ಕೆ ಬೇಸತ್ತು ದೂರವಾಗಿದ್ದರು. ಇದೀಗ ಮೂರನೇ ಪತ್ನಿಯನ್ನೂ ಸಹ ಅನುಮಾನದಿಂದ ಮನೆಯಲ್ಲಿಯೇ ಬಂಧನ ಮಾಡಿದ್ದಾರೆ.

ಮನೆಯಲ್ಲಿಯೇ ಆರೋಪಿ ಸಣ್ಣಾಲಯ್ಯ ಪತ್ನಿಯನ್ನು ಬಂಧಿಸಿದ್ದಾನೆ. ಎಲ್ಲಾ ಕಿಟಕಿಗಳನ್ನು ಭದ್ರಪಡಿಸಿ ಹೊರಗೆ ಯಾರೊಂದಿಗೂ ಮಾತನಾಡಲು ಸಾಧ್ಯವಾಗದಂತೆ ಮಾಡಿದ್ದಾನೆ. ಮನೆಯ ಬಾಗಿಲಿಗೆ ಮೂರು ಬೀಗ ಸಹ ಹಾಕಿದ್ದನಂತೆ. ಮನೆಯೊಳಗೆ ಶೌಚಾಲಯ ಇಲ್ಲದ ಕಾರಣ ಮನೆಯಲ್ಲಿ ಬಕೆಟ್ ಇರಿಸಿ ರಾತ್ರಿ ವೇಳೆ ಮಲ ಹಾಗೂ ಮೂತ್ರವನ್ನು ಸಹ ಆತನೇ ಹೊರಹಾಕುತ್ತಿದ್ದ ಎಂದು ಸಹ ಹೇಳಲಾಗಿದೆ. ಇನ್ನೂ ಸಣ್ಣಾಲಯ್ಯನಿಗೆ ಬುದ್ದಿವಾದ ಹೇಳುವ ನಿಟ್ಟಿನಲ್ಲಿ ಅನೇಕ ಭಾರಿ ನ್ಯಾಯ ಪಂಚಾಯತಿ ಸಹ ನಡೆದಿತ್ತಂತೆ. ಆದರೂ ಸಹ ಆತ ತನ್ನ ಚಾಳಿಯನ್ನು ಬಿಟ್ಟಿರಲಿಲ್ಲವಂತೆ. ಇದೆಲ್ಲಾ ಸಾಲದು ಎಂಬಂತೆ ಈ ಬಗ್ಗೆ ಯಾರಿಗಾದರೂ ತಿಳಿಸಿದರೇ ಕೊಲೆ ಮಾಡುವುದಾಗಿ ಬೆದರಿಕೆ ಸಹ ಹಾಕಿದ್ದ ಎನ್ನಲಾಗಿದೆ.

Most Popular

To Top