ತಿಮ್ಮಪ್ಪನ ಭಕ್ತರಿಗೆ ಮತ್ತೊಂದು ಬಂಪರ್ ಆಫರ್ ಕೊಟ್ಟ ಟಿಟಿಡಿ, ಮನೆ ಮಂದಿಗೆಲ್ಲಾ ವಿಐಪಿ ದರ್ಶನಕ್ಕೆ ಅವಕಾಶ?

Follow Us :

ಕಲಿಯುಗ ದೈವ ತಿರುಮಲ ತಿಮ್ಮಪ್ಪನ ದರ್ಶನಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಕಾಯುತ್ತಿರುತ್ತಾರೆ. ಗಂಟೆಗಟ್ಟಲೇ, ದಿನಗಟ್ಟಲೇ ತಿಮ್ಮಪ್ಪನ ದರ್ಶನಕ್ಕೆ ಕಾಯುತ್ತಾರೆ. ಇದೀಗ ತಿರುಪತಿ ಶಾಸಕ ಹಾಗೂ ಟಿಟಿಡಿ ಅಧ್ಯಕ್ಷ ಕರುಣಾಕರರೆಡ್ಡಿ ಅಧ್ಯಕ್ಷತೆಯಲ್ಲಿ ಟಿಟಿಡಿ ನೂತನ ಆಡಳಿತ ಮಂಡಳಿಯ ಮೊದಲ ಸಭೆ ನಡೆದಿದ್ದು, ಈ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಿರುಪತಿಯ ಅನ್ನಮಯ್ಯ ಭವನದಲ್ಲಿ ನೂತನ ಆಡಳಿತ ಮಂಡಳಿಯ ಸಭೆ ನಡೆದಿದೆ. ಸಭೆಯ ಬಳಿಕ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕಾರರೆಡ್ಡಿ ಮಾತನಾಡಿ, ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ನಡೆದ ನಿರ್ಣಯಗಳನ್ನು ಬಹಿರಂಗ ಪಡಿಸಿದ್ದಾರೆ. ಸನಾತನ ಹಿಂದೂ ಧರ್ಮದ ಬಗ್ಗೆ ಯುವ ಸಮುದಾಯದಲ್ಲಿ ಭಕ್ತಿಯನ್ನು ಹೆಚ್ಚಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ರಾಮ ಕೋಟಿಯಂತೆ ಗೋವಿಂದ ಕೋಟಿ ಬರೆಯಲು ನಿರ್ಧಾರ ಮಾಡಲಾಗಿದೆ. 25 ವರ್ಷದೊಳಗಿನ ಯುವ ಸಮುದಾಯ ಗೋವಿಂದ ಕೋಟಿ ಬರೆದರೇ ಅವರ ಇಡೀ ಕುಟುಂಬಕ್ಕೆ ವಿಐಪಿ ದರ್ಶನ ನೀಡುವುದಾಗಿ ಟಿಟಿಡಿ ತಿಳಿಸಿದೆ. ಎಲ್.ಕೆ.ಜಿ ಯಿಂದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅರ್ಥವಾಗುವಂತಹ ಮಾದರಿಯಲ್ಲಿ ಭಗವದ್ಗೀತೆ ಪುಸ್ತಕಗಳನ್ನು ಮುದ್ರಿಸಿ ವಿತರಿಸಲು ಸಭೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಅಷ್ಟೇಅಲ್ಲದೇ ಮುಂಬೈನ ಬಾಂದ್ರಾದಲ್ಲಿ ವೆಂಕಟೇಶ್ವರಸ್ವಾಮಿ ದೇವಸ್ಥಾನ ಹಾಗೂ ಮಾಹಿತಿ ಕೇಂದ್ರವನ್ನು ಸಹ ತೆರೆಯಲು ತೀರ್ಮಾಣ ತೆಗೆದುಕೊಳ್ಳಲಾಗಿದೆ. ಮಕ್ಕಳ ಆಸ್ಪತ್ರೆಗೆ 29 ತಜ್ಞರು, 15 ವೈದ್ಯರು ಹಾಗೂ 300 ಉದ್ಯೋಗಿಗಳ ನೇಮಕಕ್ಕೆ ಅನುಮೋದನೆ ಸಹ ನೀಡಲಾಗಿದೆ. ಅದರ ಜೊತೆಗೆ ಟಿಟಿಡಿಗೆ ಸೇರಿದ ಆಸ್ಪತ್ರೆಗಳಲ್ಲಿ 2.16 ಕೋಟಿ ವೆಚ್ಚ ಔಷಧಗಳ ಖರೀದಿ ಹಾಗೂ 47 ವೈದಿಕ ಬೋಧಕ ಹುದ್ದೆಗಳ ನೇಮಕಕ್ಕೂ ಸಹ ಆಡಳಿತ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ಅನೇಕ ಅಭಿವೃದ್ದಿ ಕಾಮಗಾರಿಗಳು ಹಾಗೂ ಕೆಲವೊಂದು ಹುದ್ದೆಗಳ ಭರ್ತಿ ಮಾಡಲು ಸರ್ಕಾರದ ಅನುಮತಿಗೆ ಮನವಿ ಸಹ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ ಅವರು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ನೀಡಿದ ಹೇಳಿಕೆಯನ್ನು ಖಂಡಿಸಿದ್ದಾರೆ.