ತಿರುಮಲದ ಪಾದಚಾರಿ ಮಾರ್ಗದಲ್ಲಿ ಹಲವು ಬದಲಾವಣೆಗಳು, ಮದ್ಯಾಹ್ನ 2 ಗಂಟೆ ಬಳಿಕ ಮಕ್ಕಳಿಗೆ ನೋ ಎಂಟ್ರಿ….!

Follow Us :

ದೇಶದಾದ್ಯಂತ ಹೆಚ್ಚು ಪ್ರಖ್ಯಾತಿ ಪಡೆದ ಆಧ್ಯಾತ್ಮಿಕ ಕ್ಷೇತ್ರ ತಿರುಪತಿ ವೆಂಕಟೇಶ್ವರಸ್ವಾಮಿ ದರ್ಶನಕ್ಕೆ ಹೋಗುವ ಪಾದಚಾರಿ ಮಾರ್ಗದಲ್ಲಿ ಚಿರತೆ ದಾಳಿ ಹೆಚ್ಚಾಗಿದೆ. ಕಳೆದ ಶುಕ್ರವಾರ ಆರು ವರ್ಷದ ಬಾಲಕಿ ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದಾಗ ಚಿರತೆ ಬಾಲಕಿಯ ಮೇಲೆ ಧಾಳಿ ಮಾಡಿದೆ. ಈ ಘಟನೆಯ ಬಳಿಗೆ ಟಿಟಿಡಿ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಇದೀಗ 15 ವರ್ಷದ ಒಳಗಿನ ಮಕ್ಕಳಿಗೆ ಪಾದಾಚಾರಿ ಮಾರ್ಗದಲ್ಲಿ 2 ಗಂಟೆಯ ಬಳಿಕ ಪ್ರವೇಶಕ್ಕೆ ನಿರ್ಭಂದ ಹೇರಲಾಗಿದೆ ಎಂದು ತಿಳಿದುಬಂದಿದೆ.

ತಿಮ್ಮಪ್ಪನ ದರ್ಶನಕ್ಕೆ  ಪಾದಾಚಾರಿ ಮಾರ್ಗದಲ್ಲಿ ಅನೇಕ ಭಕ್ತರು ರಾತ್ರಿ ಹಗಲು ದರ್ಶನಕ್ಕೆ ಹೋಗುತ್ತಿದ್ದರು. ಆದರೆ ಕಳೆದ ಶುಕ್ರವಾರ ಆರು ವರ್ಷದ ಬಾಲಕಿ ಲಕ್ಷಿತಾ ಪಾದಚಾರಿ ಮಾರ್ಗದ ಮೂಲಕ ಹೋಗುತ್ತಿದ್ದಾಗ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಲಕ್ಷಿತಾ ಪೋಷಕರಾದ ಶಶಿಕಲಾ ಹಾಗೂ ದಿನೇಶ್ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ನಂತರ ಆಕೆ ಕಾಣೆಯಾದಳು. ಕೂಡಲೇ ಪೋಷಕರು ಟಿಟಿಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಶೋಧ ಕಾರ್ಯ ಶುರು ಮಾಡಲಾಗಿತ್ತು. ಬಳಿಕ ನರಸಿಂಹಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ಶವ ಪತ್ತೆಯಾಗಿತ್ತು. ಮಗುವಿನ ದೇಹದ ಮೇಲಿರುವ ಗಾಯಗಳನ್ನು ಪರೀಕ್ಷಿಸಿದಾಗ ಮಗು ಚಿರತೆ ದಾಳಿಯಿಂದ ಮೃತಪಟ್ಟಿದ್ದಾಳೆ ಎಂದು ಶಂಕಿಸಿದ್ದಾರೆ.

ಇನ್ನೂ ಈ ಘಟನೆಯ ಬಳಿಕ ಟಿಟಿಡಿ ಕೆಲವೊಂದು ಮಾರ್ಗಸೂಚಿ ಹಾಗೂ ನಿಯಮಗಳನ್ನು ಹೊರಡಿಸಿದೆ. ಬೆಟ್ಟಕ್ಕೆ ತೆರಳುವಂತಹ ಪಾದಚಾರಿ ಮಾರ್ಗದಲ್ಲಿ ಹದಿನೈದು ವರ್ಷಕ್ಕಿಂದ ಕಡಿಮೆ ವಯಸ್ಸಿನ ಮಕ್ಕಳೊಂದಿಗೆ ಆಗಮಿಸುವಂತಹ ಯಾತ್ರಾರ್ಥಿಗಳಿಗೆ ಬೆಳಿಗ್ಗೆ 5 ರಿಂದ ಮದ್ಯಾಹ್ನ 2 ಗಂಟೆಯೊಳಗೆ ಮಾತ್ರ ಹತ್ತಲು ಅವಕಾಶ ಮಾಡಿಕೊಡಲಾಗಿದೆ. ಇದು ಕಳೆದ ಭಾನುವಾರದಿಂದಲೇ ಜಾರಿಗೊಳಿಸಲಾಗಿದೆ. ಜೊತೆಗೆ ಸಂಜೆ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ದ್ವಿಚಕ್ರ ವಾಹನಗಳ ಸಂಚಾರವನ್ನು ಸಹ ನಿಷೇಧಿಸಲಾಗಿದೆ ಎಂದು ಟಿಟಿಡಿ ಹೊಸ ನಿಯಮ ಹೊರಡಿಸಿದೆ.

ಇನ್ನೂ ಅಲಿಪಿರಿ ಸಮೀಪವಿರುವ ಗಾಳಿಗೋಪುರದಿಂದ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಸೇರಿದಂತೆ ನಾಲ್ಕೈದು ಕಡೆ ಚಿರತೆಯ ಓಡಾಡಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಪಾದಚಾರಿ ಮಾರ್ಗದಲ್ಲಿ ದೇವಾಲಯಕ್ಕೆ ಹೋಗುವಂತಹ ಭಕ್ತರಿಗೆ ರಣ್ಯ ಇಲಾಖೆ ಹಾಗೂ ಪೊಲೀಸರ ಭದ್ರತೆ ಸಹ ಹೆಚ್ಚಿಸಲಾಗಿದೆ. ವನ್ಯ ಜೀವಿಗಳ ಸಮಸ್ಯೆ ಇತ್ಯರ್ಥ ಆಗುವವರೆಗೂ ಟಿಟಿಡಿ ಹೊರಡಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ತಿರುಪತಿ ತಿರುಮಲ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿಕೊಂಡಿದೆ.