Film News

ಬಡವರಿಗಾಗಿ 12 ಎಕರೆಯಲ್ಲಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾದ ರಜನಿಕಾಂತ್……!

ದೇಶದ ಸಿನಿರಂಗದಲ್ಲಿ ದೊಡ್ಡ ಸ್ಟಾರ್‍ ನಟನಾದರೂ ಸಹ ಸರಳವಾದ ವ್ಯಕ್ತಿತ್ವವುಳ್ಳ ನಟ ರಜನಿಕಾಂತ್ ರವರು ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುತ್ತಾರೆ. ಸ್ಟಾರ್‍ ನಟ ಎಂಬ ಅಹಂ ಅವರಲ್ಲಿ ಕಿಂಚಿತ್ತು ಇಲ್ಲ ಎಂದೇ ಹೇಳಲಾಗುತ್ತದೆ. ಇದೀಗ ರಜನಿಕಾಂತ್ ರವರು ಬಡವರಿಗಾಗಿ ಸುಮಾರು 12 ಎಕರೆಯಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿ, ಉಚಿತವಾಗಿ ವೈದ್ಯಕೀಯ ಸೇವೆ ಕಲ್ಪಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಅವರ ಈ ಮಹತ್ತರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ದೇಶದ ಸಿನಿರಂಗದ ಸ್ಟಾರ್‍ ನಟರಲ್ಲಿ ಒಬ್ಬರಾದ ರಜನಿಕಾಂತ್ ರವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಅನೇಕರು ರಜನಿಕಾಂತ್ ರವರನ್ನು ದೇವರಂತೆ ಅಭಿಮಾನಿಸುತ್ತಾರೆ. ಈ ಕಾರಣದಿಂದಲೇ ಅವರು ರಾಜಕೀಯಕ್ಕೆ ಪ್ರವೇಶ ಮಾಡಿ ಪ್ರಜಾಸೇವೆ ಮಾಡಬೇಕು ಎಂದು ಸಹ ಅಂದುಕೊಂಡಿದ್ದರು. ಆದರೆ ಕೆಲವೊಂದು ಕಾರಣಗಳಿಂದ ರಾಜಕೀಯದಲ್ಲಿ ಎಂಟ್ರಿ ಕೊಡಲು ಆಗಲಿಲ್ಲ ಎಂದೇ ಹೇಳಬಹುದು. ಆರೋಗ್ಯದ ಕಾರಣದಿಂದ ಅವರು ರಾಜಕೀಯ ಎಂಟ್ರಿಯಿಂದ ಹಿಂದೆಸರಿದು, ಬಳಿಕ ಸಿನೆಮಾಗಳಲ್ಲಿ ಮುಂದುವರೆಯುತ್ತಿದ್ದಾರೆ. ಕೊನೆಯದಾಗಿ ಅವರು ಜೈಲರ್‍ ಸಿನೆಮಾದ ಮೂಲಕ ಭಾರಿ ಸಕ್ಸಸ್ ಕಂಡುಕೊಂಡರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ತೆರೆಕಂಡ ಲಾಲ್ ಸಲಾಂ ಸಿನೆಮಾ ಮಾತ್ರ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು.

ರಾಜಕೀಯದ ಮೂಲಕ ಪ್ರಜಾಸೇವೆ ಮಾಡಲು ಯೋಜಿಸಿದ್ದ ರಜನಿಕಾಂತ್ ರವರಿಗೆ ಅದು ಸಾಧ್ಯವಾಗದ ಕಾರಣ ಜನರಿಗೆ ಏನಾದರೂ ಸೇವೆ ಮಾಡಬೇಕು ಎಂದು ನಿರ್ಣಯ ತೆಗೆದುಕೊಂಡಿದ್ದಾರಂತೆ. ಅದರಂತೆ ಚೆನೈನಲ್ಲಿ 12 ಎಕರೆಯಲ್ಲಿ ದೊಡ್ಡ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರಂತೆ. ಕೆಲವು ದಿನಗಳ ಹಿಂದೆಯಷ್ಟೆ ಚೆನೈನಲ್ಲಿನ ತಿರುಪ್ಪೋರೂರ್‍ ರಿಜಿಸ್ಟ್ರಾರ್‍ ಕಚೇರಿಗೆ ಹೋಗಿ, ಅಲ್ಲಿ ಹೊಸದಾಗಿ ಖರೀದಿಸಿದ ಜಮೀನನ್ನು ರಿಜಿಸ್ಟ್ರೇಷನ್ ಮಾಡಿದ್ದಾರೆ. ಈ ಸಮಯದಲ್ಲಿ ರಜನಿಯವರನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಅವರು ಜಮೀನು ಖರೀದಿಸಿ ಆಸ್ಪತ್ರೆ ನಿರ್ಮಾಣ ಮಾಡುವ ಸಿದ್ದತೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಹೊಸದಾಗಿ ನಿರ್ಮಾಣವಾಗುವ ಆಸ್ಪತ್ರೆಯಲ್ಲಿ ಬಡವರಿಗೆ ಗುಣಮಟ್ಟದ ಉಚಿತ ಚಿಕಿತ್ಸೆ ನೀಡಲು ಪ್ರಣಾಳಿಕೆ ರೆಡಿಯಾಗಿದೆ ಎಂದು ಹೇಳಲಾಗುತ್ತಿದೆ. ಬಡವರಿಗೆ ಉಚಿತವಾಗಿದ್ದು, ಶ್ರೀಮಂತರಿಗೆ ಮಾತ್ರ ಉಚಿತವಲ್ಲ ಎಂದು ಹೇಳಲಾಗುತ್ತಿದೆ. ಶೀಘ್ರದಲ್ಲೇ ಈ ಆಸ್ಪತ್ರೆಯ ಭೂಮಿ ಪೂಜೆ ಸಹ ನಡೆಯಲಿದೆ ಎನ್ನಲಾಗಿದೆ. ಸದ್ಯ ಸಿನೆಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಆಸ್ಪತ್ರೆಯ ನಿರ್ಮಾಣದ ಜವಾಬ್ದಾರಿಯನ್ನು ಸ್ನೇಹಿತನಿಗೆ ವಹಿಸಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಜೈ ಭೀಮ್ ಖ್ಯಾತಿಯ ನಿರ್ದೇಶಕ ಜ್ಞಾನವೇಲ್ ಜೊತೆಗೆ ವೈದಾತಿಯನ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

Most Popular

To Top