News

ಬೆಂಗಳೂರಿನಲ್ಲಿ ರಾಮಮಂದಿರ ಉದ್ಘಾಟಿಸಿ, ಜೈ ಶ್ರೀರಾಮ್ ಎಂದ ಸಿದ್ದರಾಮಯ್ಯ, ಜೈ ಶ್ರೀರಾಮ್ ಒಬ್ಬರ ಸ್ಲೋಗನ್ ಅಲ್ಲ ಎಂದ ಸಿಎಂ….!

ಸದ್ಯ ದೇಶದಾದ್ಯಂತ ರಾಮಮಂದಿರದ್ದೆ ಸದ್ದು ಎಂದು ಹೇಳಬಹುದು. ರಾಮ  ಮಂದಿರ ಲೋಕಾರ್ಪಣೆಯ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದ ಸಿಎಂ ಸಿದ್ದರಾಮಯ್ಯ ತಮ್ಮದೇ ಆದ ಶೈಲಿಯಲ್ಲಿ ಅಭಿಪ್ರಾಯ ಕೊಟ್ಟಿದ್ದರು. ಕಾಂಗ್ರೇಸ್ ನವರು ಹಿಂದೂ ವಿರೋಧಿಗಳು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ನಿರ್ಮಾಣವಾದ ರಾಮ ಸೀತ ಲಕ್ಷಣ ದೇವಾಲಯ ಹಾಗೂ 33 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹದ ಶಿಲಾ ಪ್ರತಿಷ್ಟಾಪನಾ ಕಾರ್ಯಕ್ರಮವನ್ನು ಉದ್ಘಾಟಿಸಿದ್ದಾರೆ. ಬಳಿಕ ಜೈ ಶ್ರೀರಾಮ್ ಎಂದೂ ಘೋಷಣೆ ಕೂಗಿದ್ದಾರೆ.

ಈ ಸಮಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೈ ಶ್ರೀರಾಮ್ ಎಂಬುದು ಒಬ್ಬರ ಸ್ಲೋಗನ್ ಅಲ್ಲ ಅದನ್ನು ನಾನು ಹೇಳುತ್ತೇನೆ. ಆದರೆ ಕೆಲವರು ಮಾತ್ರ ಶ್ರೀರಾಮ್ ಸ್ಲೋಗನ್ ತಮ್ಮ ಸ್ವತ್ತು ಎಂದುಕೊಂಡಿದ್ದಾರೆ. ಎಲ್ಲರೂ ಜೈ ಶ್ರೀರಾಮ್ ಎಂದು ಹೇಳಿ ಎಂದು ಜನರೊಂದಿಗೆ ತಾವೂ ಸಹ ಜೈ ಶ್ರೀರಾಮ್ ಎಂದು ಕೂಗಿದರು. ನಮ್ಮೂರಿನಲ್ಲೂ ರಾಮನ ಗುಡಿ ಕಟ್ಟಿಸಿದ್ದೇವೆ. ನಾನು ನಾಸ್ತಿಕನಲ್ಲ, ಆಸ್ತಿಕ. ರಾಜ್ಯದ ಹಳ್ಳಿ ಹಳ್ಳಿಗಳಲ್ಲೂ ರಾಮನ ಗುಡಿಗಳಿವೆ. ಅವರವರ ನಂಬಿಕೆಯಂತೆ ರಾಮನನ್ನು ಪೂಜಿಸುತ್ತೇವೆ, ಗುಡಿ ಕಟ್ಟುತ್ತೇವೆ. ನಮ್ಮ ದೇಶದ ಮೇಲೆ ವಿದೇಶಗಳು ಸುಮಾರು ಬಾರಿ ಧಾಳಿ ಮಾಡಿದ್ದಾರೆ. ಡಚ್ಚರು, ಫ್ರೇಂಚರು ಸೇರಿದಂತೆ ಅನೇಕರು ನಿರಂತರವಾಗಿ ಧಾಳಿ ಮಾಡಿದ್ದಾರೆ. ಆದರೆ ನಮ್ಮ ಸಂಸ್ಕೃತಿ, ನಮ್ಮ ಧರ್ಮ ಎಲ್ಲವನ್ನೂ ಕಟ್ಟಿಹಾಕಿದ್ದು, ನಾವು ಉಳಿದುಕೊಂಡಿದ್ದೇವೆ ಎಂದಿದ್ದಾರೆ.

ಶ್ರೀರಾಮನ ಬಗ್ಗೆ ಸಿದ್ದರಾಮಯ್ಯ ಟ್ವೀಟ್ ಸಹ ಮಾಡಿದ್ದು, ಅದರಂತೆ, ನನಗೆ ತಿಳಿದಿರುವ ರಾಮ, ನಾನು ಪೂಜಿಸುವ ರಾಮ ವಚನ ಪರಿಪಾಲನೆಯನ್ನೇ ತನ್ನ ಉಸಿರಾಗಿಸಿಕೊಂಡವನು. ನನಗೆ ತಿಳಿದಿರುವ ಹನುಮ, ನಾನು ಪೂಜಿಸುವ ಹನುಮ ರಾಮನಾಮಕ್ಕಿಂತ ಮಿಗಿಲಿಲ್ಲ, ರಾಮನೇ ಜಗವೆಲ್ಲಾ ಎಂದು ತಿಳಿದು ರಾಮಭಕ್ತಿಯನ್ನೇ ಎದೆಯೊಳಗೆ ಇಳಿಸಿಕೊಂಡವನು. ಹನುಮನ ನಾಡಿನವರಾದ ನಮಗೆ ರಾಮನ ಬಗ್ಗೆ, ರಾಮಭಕ್ತಿಯ ಬಗ್ಗೆ ಹೇಳಿಕೊಡುವ ಅಗತ್ಯವಿಲ್ಲ. ಅದೊಂದು ತೋರ್ಪಡಿಕೆಯ ವಿದ್ಯಮಾನವೂ ಅಲ್ಲ. ರಾಮಭಕ್ತಿ ನಿರಂತರ. ವೈಯಕ್ತಿಕವಾಗಿ ನಾನು, ರಾಮನಿಂದ ವಚನ ಪರಿಪಾಲನೆಯನ್ನು, ಭೀಮನಿಂದ (ಡಾ. ಅಂಬೇಡ್ಕರ್‌) ಸಮತೆ ಅನುಷ್ಠಾನವನ್ನು, ಬಸವನಿಂದ ನುಡಿ, ನಡೆಯ ನಡುವೆ ಅಂತರವಿಲ್ಲದೆ ಬದುಕುವುದನ್ನು ನನ್ನಲ್ಲಿ ಅಳವಡಿಸಿಕೊಳ್ಳುತ್ತಲೇ ಮುಂದುವರಿದಿದ್ದೇನೆ. ಹನುಮನ ನಾಡಿನವರಾದ ನಾವು ಹನುಮನ ಎದೆಗಿಂತ ಮಿಗಿಲಾದ ಗುಡಿ ರಾಮನಿಗೆ ಬೇರಾವುದೂ ಇಲ್ಲ ಎಂದು ತಿಳಿದೇ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ಊರೂರಿನಲ್ಲಿಯೂ ಹನುಮನಿಗೆ ಗುಡಿ ಕಟ್ಟಿದೆವು. ರಾಮನಿಗೆ ಹನುಮನ ಎದೆಗಿಂತ ಬೇರಾವುದಾದರೂ ಶ್ರೇಷ್ಠ ಗುಡಿಯನ್ನು ಈ ಜಗತ್ತಿನಲ್ಲಿ ಯಾರಾದರೂ ಕಟ್ಟಲು ಸಾಧ್ಯವೇ? ನಿಜ ರಾಮಭಕ್ತರು ಉತ್ತರ ಹೇಳಬೇಕು. ರಾಮ ತನ್ನ ಭಕ್ತರಲ್ಲಿ ನೋಡುವುದು ಅವರ ಸತ್ಯಸಂಧತೆ, ವಚನ ಪರಿಪಾಲನೆಯನ್ನೇ ಹೊರತು ಢಾಂಭಿಕತೆಯನ್ನಲ್ಲ. ರಾಜಕಾರಣಿಗಳಿಂದ ರಾಮ ನಿರೀಕ್ಷಿಸುವುದು ಶಾಂತಿ, ನೆಮ್ಮದಿ, ಸಹಬಾಳ್ವೆಯಿಂದ ಕೂಡಿದ ರಾಮರಾಜ್ಯದ ನಿರ್ಮಾಣವನ್ನು ಮಾತ್ರ ಎಂದು ಟ್ವೀಟ್ ಮಾಡಿದ್ದಾರೆ.

Most Popular

To Top