News

ಭ್ರಷ್ಟ ಸುಧಾಕರ್ ಗೆ ಜನತಾ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಿ ಎಂದ ಸಿಎಂ, ಕೌಂಟರ್ ಕೊಟ್ಟ ಮಾಜಿ ಸಚಿವ ಡಾ.ಸುಧಾಕರ್….!

ಲೋಕಸಭಾ ಚುನಾವಣಾ ಕಾವು ದಿನೇ ದಿನೇ ಏರುತ್ತಲೇ ಇದೆ. ನಾಯಕರುಗಳು ಪರಸ್ಪರ ಹೇಳಿಕೆಗಳನ್ನು ನೀಡುತ್ತಾ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರದ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಪ್ರಚಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್‍ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟ ಸುಧಾಕರ್‍ ನನ್ನು ಈ ಬಾರಿ ಸೋಲಿಸಿ ಜನತಾ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಬೇಕೆಂದು ತಿಳಿಸಿದ್ದಾರೆ. ಈ ಹೇಳಿಕೆಗೆ ಮಾಜಿ ಸಚಿವ ಡಾ.ಸುಧಾಕರ್‍ ಸಹ ಟ್ವೀಟ್ ಮೂಲಕ ಕೌಂಟರ್‍ ಕೊಟ್ಟಿದ್ದಾರೆ.

ಕರ್ನಾಟಕ ಸಿಎಂ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೇಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರ ಬೃಹತ್ ರೋಡ್ ಶೋ ನಡೆಸಿ ಪ್ರಚಾರ ನಡೆಸಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಸುಧಾಕರ್‍ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸುಧಾಕರ್‍ ಭ್ರಷ್ಟಾಚಾರಿ ಎಂಬ ಕಾರಣಕ್ಕೆ ನೀವೆ ಸೋಲಿಸಿದ್ದೀರಾ, ಇದೀಗ ಮತ್ತೆ ಅವರು ಪ್ರಭಾವ ಬಳಸಿ ಲೋಕಸಭಾ ಚುನಾವಣೆಗೆ ನಿಂತಿದ್ದಾರೆ. ನೀವು ಅವರಿಗೆ ಜನತಾ ನ್ಯಾಯಾಲಯದಲ್ಲಿ ಶಿಕ್ಷೆ ಕೊಡಬೇಕು. ಸುಧಾಕರ್‍ ವಿರುದ್ದ ತನಿಖೆ ನಡೆಯುತ್ತಿದೆ. ಶೀಘ್ರದಲ್ಲೇ ಅವರು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗುತ್ತಾರೆ. ಈ ಬಾರಿ ಕೇಂದ್ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರೊಲ್ಲ. ಐ.ಎನ್.ಡಿ.ಐ.ಎ ಕೂಟ ಅಧಿಕಾರಕ್ಕೆ ಬರುತ್ತದೆ. ಈ ನಿಟ್ಟಿನಲ್ಲಿ ಚಿಕ್ಕಬಳ್ಳಾಪುರದಲ್ಲಿ ರಕ್ಷಾ ರಾಮಯ್ಯನವರಿಗೆ ಅಭೂತಪೂರ್ವ ಗೆಲುವು ಸಿಗಲಿದೆ ಎಂದರು.

ಇನ್ನೂ ಸಿದ್ದರಾಮಯ್ಯನವರ ಆರೋಪಗಳಿಗೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‍ ಟ್ವೀಟ್ ಮೂಲಕ ಕೌಂಟರ್‍ ಕೊಟ್ಟಿದ್ದಾರೆ. ಅವರ ಟ್ವೀಟ್ ನಲ್ಲಿರುವಂತೆ 2018ರಲ್ಲಿ ಮುಖ್ಯಮಂತ್ರಿ ಆಗಿದ್ದೂ 35,000ಕ್ಕು ಹೆಚ್ಚು ಮತಗಳ ಅಂತರದಿಂದ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತರಲ್ಲ ಆಗ ಎಷ್ಟು ಭ್ರಷ್ಟಾಚಾರ ಮಾಡಿದ್ದೀರಿ ಅಂತ ಜನ ನಿಮ್ಮನ್ನ ಸೋಲಿಸಿದ್ದರು? 2019ರಲ್ಲಿ ನಿಮ್ಮ ನಾಯಕ  ರಾಹುಲ್ ಗಾಂಧಿಯವರು 55,000ಕ್ಕು ಹೆಚ್ಚು ಮತಗಳ ಅಂತರದಿಂದ ಅಮೇಥಿಯಲ್ಲಿ ಸೋತರಲ್ಲಾ, ನಿಮ್ಮ ಪ್ರಕಾರ ರಾಹುಲ್ ಗಾಂಧಿ ಅವರು ಭ್ರಷ್ಟಾಚಾರ ಮಾಡಿದ್ದಕ್ಕೆ ಸೋತಿದ್ದಾ? ಎಂದು ಪ್ರಶ್ನೆ ಮಾಡಿದ್ದಾರೆ.

ಮುಂದುವರೆದು ನನ್ನ ಮೇಲೆ ತನಿಖೆಗೆ ಆದೇಶ ಮಾಡಿದ್ದೀರಿ. ಆದರೆ ಇನ್ನೂ ತನಿಖೆ ನಡೆಯುತ್ತಿರುವಾಗಲೇ, ಸಾಕ್ಷ್ಯ ಸಿಕ್ಕಿದೆ, ನಮಗೆ ಮಾಹಿತಿ ಇದೆ ಎಂದು ಹೇಳಿದ್ದೀರಲ್ಲ, ಅದರಲ್ಲೇ ನಿಮ್ಮ ತನಿಖೆ ಎಷ್ಟು ಪೂರ್ವಗ್ರಹ ಪೀಡಿತ, ಎಷ್ಟು ನಿಷ್ಪಕ್ಷಪಾತ ಅಂತ ತಿಳಿಯುತ್ತದೆ. ಎಲ್ಲಾ ಸರ್ವೇ ವರದಿಗಳು, ಸಮೀಕ್ಷೆಗಳು ಚಿಕ್ಕಬಳ್ಳಾಪುರದಲ್ಲಿ ಎನ್ ಡಿಎ ಗೆಲ್ಲುತ್ತದೆ, ನಾನು ಗೆಲ್ಲಲಿದ್ದೇನೆ ಎಂದು ಹೇಳುತ್ತಿರುವುದರಿಂದ ಹತಾಶೆಯಿಂದ ನನ್ನ ಮೇಲೆ ಕೆಸರೆರಚುವ ಪ್ರಯತ್ನ ಮಾಡುತ್ತಿದ್ದೀರಿ. ಈ ಎಲ್ಲಾ ಅಪಪ್ರಚಾರಗಳು, ತೇಜೋವಧೆಯ ಪ್ರಯತ್ನಗಳು ಕಾಂಗ್ರೆಸ್ ಪಕ್ಷಕ್ಕೇ ತಿರುಗು ಬಾಣ ಆಗಲಿದೆ. 2013ರಿಂದ 2018ರವರೆಗೆ ನಿಮ್ಮ ಜೊತೆ ಕೆಲಸ ಮಾಡಿದ್ದೇನೆ. ನಾನು ಆಗ ನೋಡಿದ್ದ ಸಿದ್ದರಾಮಯ್ಯನವರಿಗೂ ಈಗ ನೋಡುತ್ತಿರುವ ಸಿದ್ದರಾಮಯ್ಯನವರಿಗೂ ಬಹಳ ವ್ಯತ್ಯಾಸವಿದೆ. ನಿಮ್ಮ ಸ್ಥಿತಿ ಬಗ್ಗೆ ಕನಿಕರವಿದೆ. ನಾನು ಎಂದೂ ಜಾತಿ ರಾಜಕಾರಣ ಮಾಡಿದವನಲ್ಲ. ಅದರಲ್ಲಿ ನನಗೆ ನಂಬಿಕೆಯೂ ಇಲ್ಲ. ಆದರೆ ತಮ್ಮ ಒಕ್ಕಲಿಗ ದ್ವೇಷ ಗುಟ್ಟೇನು ಅಲ್ಲ. ಅದು ಇಡೀ ರಾಜ್ಯಕ್ಕೆ ತಿಳಿದಿರುವ ವಿಷಯ ಎಂದು ಕೌಂಟರ್‍ ಕೊಟ್ಟಿದ್ದಾರೆ.

Most Popular

To Top