ಮಕ್ಕಳು ಹೂ ಕಿತ್ತರು ಎಂದು ಗಾರ್ಡನ್ ಮಾಲೀಕ ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿ…..!

Follow Us :

ಇಂದಿನ ಸಮಾಜದಲ್ಲಿ ಕೆಲವೊಮ್ಮೆ ಕ್ಷುಲಕ ಕಾರಣಗಳಿಂದ ಹಲ್ಲೆಗಳು, ಗಲಾಟೆಗಳು ನಡೆಯುತ್ತಿರುತ್ತವೆ. ಅದೇ ಮಾದರಿಯಲ್ಲಿ ಅಂಗನವಾಡಿ ಮಕ್ಕಳು ಹೂ ಕಿತ್ತರು ಎಂದು ಗಾರ್ಡನ್ ಮಾಲೀಕ ಅಂಗನವಾಡಿ ಸಹಾಯಕಿಯ ಮೂಗನ್ನು ಕತ್ತರಿಸಿದ್ದಾನೆ. ಈ ಅಮಾನವೀಯ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ತನಗೆ ನ್ಯಾಯ ಕೊಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‍ ರವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬೆಳಗಾವಿಯ ಬಾಸುರ್ತಿ ಎಂಬ ಗ್ರಾಮದ ಅಂಗನವಾಡಿಯಲ್ಲಿ ಸಹಾಯಕಿಯಾಗಿರುವ ಸುಗಂಧಾ ಮೋರೆ ರವರೇ ಸಂತ್ರಸ್ತೆಯಾಗಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಈಕೆಯ ಮೇಲೆ ಹಲ್ಲೆ ನಡೆಸಲಾಗಿತ್ತಂತೆ. ಅಂಗನವಾಡಿಯ ಮಕ್ಕಳು ಶಾಲೆಯ ಪಕ್ಕದಲ್ಲಿರುವ ಗಾರ್ಡನ್ ನಲ್ಲಿ ಹೂ ಕಿತ್ತಿದ್ದಾರೆ. ಅದಕ್ಕೆ ಕೋಪಗೊಂಡ ಮಾಲೀಕ ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಕಲ್ಯಾಣಿ ಮೋರೆ ಎನ್ನಲಾಗಿದೆ. ಹಲ್ಲೆಗೊಳಗಾದ ಸಂತ್ರಸ್ತೆಯನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು, ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಆರೋಪಿ ಕಲ್ಯಾಣಿ ಮೋರೆ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆ ನಡೆದು ಮೂರು ದಿನಗಳಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಇತ್ತ ಸುಗಂಧಾ ಕುಟುಂಬದವರು ಬಡವರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಕಷ್ಟವಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಗಂಧಾ ಆಸ್ಪತ್ರೆಯ ಬಿಲ್ ಕಟ್ಟಲು ಪರದಾಡುವಂತಾಗಿದೆ. ಆದ್ದರಿಂದ ಸಂತ್ರಸ್ತೆಯ ಕುಟುಂಬದವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‍ ರವರಲ್ಲಿ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಇಲಾಖೆ ವತಿಯಿಂದ ಸಂತ್ರಸ್ತ ಮಹಿಳೆಗೆ ಸಹಾಯ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.