ಸೌಜನ್ಯ ಪ್ರಕರಣದ ಬಗ್ಗೆ ಮೌನ ಮುರಿದ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಭಕ್ತರಲ್ಲಿ ವಿನಂತಿ…!

ಸುಮಾರು ವರ್ಷಗಳ ಹಿಂದೆ ಭಾರಿ ಸದ್ದು ಮಾಡಿದಂತಹ ಧರ್ಮಸ್ಥಳ ಸೌಜನ್ಯಳ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮತ್ತೆ ಸದ್ದು ಮಾಡುತ್ತಿದೆ. ಕಳೆದ 2012 ರಲ್ಲಿ ನಡೆದಂತಹ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆಯಷ್ಟೆ ಸಿಬಿಐ ಕೋರ್ಟ್ ತೀರ್ಪು ನೀಡಿತ್ತು. ಇದೀಗ ಈ ತೀರ್ಪಿನ ವಿರುದ್ದ ಅಸಮಧಾನ ಬುಗಿಲೆದಿದ್ದು, ಅನೇಕರು ಮತ್ತೆ ಸೌಜನ್ಯ ಪ್ರಕರಣದ ತನಿಖೆ ನಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಇದೀಗ ಈ ಪ್ರಕರಣದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ ರವರು ಮೌನ ಮುರಿದಿದ್ದಾರೆ. ವಿನಾ ಕಾರಣ ಕ್ಷೇತ್ರ ಹಾಗೂ ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.

ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಹಾಗೂ ಹೆಗ್ಗಡೆ ಕುಟುಂಬದ ವಿರುದ್ದ ಆರೋಪ ಕೇಳಿಬಂದಿತ್ತು.  ಕಳೆದ 2012 ಜೂ 9 ರಂದು ಕಾಲೇಜು ಮುಗಿಸಿ ಮನೆಗೆ ಬರುತ್ತಿರುವ ವೇಳೆ ದಾರಿ ಮದ್ಯೆ ಕಾಡಿನಲ್ಲಿ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿತ್ತು. ಕಾಲೇಜಿನಿಂದ ಮನೆಗೆ ಹೋಗುವಾಗ ಈ ಘಟನೆ ನಡೆದಿತ್ತು. ಇನ್ನೂ ಸುಮಾರು ಸಮಯವಾದರೂ ಆಕೆ ಮನೆಗೆ ಹೋಗದ ಕಾರಣದಿಂದ ಆಕೆಯ ಮನೆಯವರು ಎಲ್ಲಾ ಕಡೆ ಹುಡುಕಾಡಿದರು. ಮರುದಿನ ಅದೇ ದಾರಿಯಲ್ಲಿ ತನಿಖೆ ನಡೆಸಿದಾಗ ಸೌಜನ್ಯ ಅರೆನಗ್ನ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿತ್ತು. ಅತ್ಯಾಚಾರ ವೆಸಗಿ ಕೊಲೆ ಮಾಡಲಾಗಿದೆ ಎಂಬ ದೂರು ಸಹ ದಾಖಲಾಗಿತ್ತು. ಬಳಿಕ ಈ ಘಟನೆಯ ವಿರುದ್ದ ರಾಜ್ಯದಾದ್ಯಂತ ಭಾರಿ ಪ್ರತಿಭಟನೆಗಳೂ ಸಹ ನಡೆದವು. ಈ ಪ್ರಕರಣದ ಆರೋಪಿ ಸಂತೋಷ್ ರಾವ್ ವಿರುದ್ದ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಕಾರಣ ಆತನನ್ನು ದೋಷ ಮುಕ್ತಗೊಳಿಸಿತ್ತು ಸಿಬಿಐ ಕೋರ್ಟ್. ಈ ತೀರ್ಪಿನ ಬಳಿಕ ಈ ಪ್ರಕರಣ ಮತ್ತೆ ಬುಗಿಲೆದ್ದಿದೆ. ನ್ಯಾಯಕ್ಕಾಗಿ ಸೌಜನ್ಯ ಪೋಷಕರು ಹಾಗೂ ಕೆಲವೊಂದು ಸಂಘ ಸಂಸ್ಥೆಗಳು ಹೋರಾಟ ನಡೆಸುತ್ತಿದ್ದಾರೆ.

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲಿನಿಂದಲೂ ಧರ್ಮಸ್ಥಳ ಕ್ಷೇತ್ರ ಹಾಗೂ ವೀರೇಂದ್ರ ಹೆಗ್ಗಡೆ ಕುಟುಂಬದ ಬಗ್ಗೆ ಆರೋಪಗಳು ಕೇಳಿಬರುತ್ತಲೇ ಇತ್ತು. ಇದೀಗ ಈ ಬಗ್ಗೆ ವೀರೇಂದ್ರ ಹೆಗ್ಗಡೆ ರವರು ರಿಯಾಕ್ಟ್ ಆಗಿದ್ದಾರೆ. ಸೌಜನ್ಯ ಹತ್ಯೆಗೆ ನ್ಯಾಯ ದೊರಕಿಸಿಕೊಡುವಂತೆ ನಮ್ಮ ಕುಟುಂಬ ಸಹ ಒತ್ತಾಯ ಮಾಡಿತ್ತು. ಉನ್ನತ ಮಟ್ಟದ ತನಿಖೆಗೂ ಸಹ ಆಗ್ರಹಿಸಲಾಗಿತ್ತು. ಬಳಿಕ ಸಿಐಡಿ ಬಳಿ ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಸಿಬಿಐ ಸಹ ತನಿಖೆ ನಡೆಸಿತ್ತು. ಇದೀಗ ಸಿಬಿಐ ಕೋರ್ಟ್ ಆರೋಪಿಯನ್ನು ಖುಲಾಸೆಗೊಳಿಸಿದೆ. ಇದೀಗ ಪುನಃ ಧರ್ಮಸ್ಥಳ ಕ್ಷೇತ್ರ ಹಾಗೂ ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಈ ಪ್ರಕರಣ ಸರ್ಕಾರ ಹಾಗೂ ತನಿಖಾ ಸಂಸ್ಥೆಯ ವ್ಯಾಪ್ತಿಯಲ್ಲಿದ್ದು, ಸರ್ಕಾರ ಹಾಗೂ ತನಿಖಾ ಸಂಸ್ಥೆ ಸೂಕ್ತ ನ್ಯಾಯ ದೊರಕಿಸಿಕೊಡಲಿ ಎಂದು ಒತ್ತಾಯ ಸಹ ಮಾಡುತ್ತೇನೆ. ಆಪಾದನೆ, ವದಂತಿಗಳು ಹಾಗೂ ಸುಳ್ಳು ಹೇಳಿಕೆಗಳಿಗೆ ಭಕ್ತರು ಹಾಗೂ ಸಾರ್ವಜನಿಕರು ಕಿವಿಗೊಡಬೇಡಿ ಎಂದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಪತ್ರಿಕಾ ಹೇಳಿಕೆ ಮೂಲಕ ವಿನಂತಿಸಿಕೊಂಡಿದ್ದಾರೆ.