News

ದೇಶದಲ್ಲಿ ಹೊಸ ವರ್ಷಕ್ಕೆ ಕೋವಿಡ್ ನಾಲ್ಕನೇ ಅಲೆ ಭೀತಿ, ದಿನೇ ದಿನೇ ಏರುತ್ತಿದೆ JN.1 ಪ್ರಕರಣ….!

ದೇಶದಲ್ಲಿ ಸಾಲು ಸಾಲು ರಜೆಗಳು, ಕ್ರಿಸ್ ಮಸ್, ಹೊಸ ವರ್ಷದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳು ಹಾಗೂ ಧಾರ್ಮಿಕ ಕೇಂದ್ರಗಳು ತುಂಬಿ ತುಳುಕುತ್ತಿವೆ. ಈ ನಡುವೆ ಕೋವಿಡ್ ಆತಂಕ ಸಹ ಹೆಚ್ಚಾಗುತ್ತಿದೆ. ಕೋವಿಡ್ ರೂಪಾಂತರಿ ತಳಿ JN.1 ಪ್ರಕರಣಗಳು ದಿನೇ ದಿನೇ ಏರುತ್ತಿವೆ. ಇದೀಗ ದೇಶದಲ್ಲಿ ಹೊಸದಾಗಿ 63 ಹೊಸ ತಳಿ ಪತ್ತೆಯಾಗಿದೆ. ಕೋವಿಡ್ ಸಕ್ರೀಯ ಸಂಖ್ಯೆ 4054ಕ್ಕೇರಿದ್ದು, ಹೊಸ ವರ್ಷಕ್ಕೆ ನಾಲ್ಕನೇ ಅಲೆ ಎದುರಾಗುವ ಭೀತಿ ಶುರುವಾಗಿದೆ.

ಭಾರತದಲ್ಲಿ ಒಟ್ಟು 63 JN.1 ಹೊಸ ತಳಿ ಪತ್ತೆಯಾಗಿದೆ. ಈ ಪೈಕಿ ಗೋವಾದಲ್ಲಿ 34 ಪ್ರಕರಣಗಳು ಹಾಗೂ ಮಹಾರಾಷ್ಟ್ರದಲ್ಲಿ 9 ಪ್ರಕರಣಗಳು ಪತ್ತೆಯಾಗಿದೆ. ಜೊತೆಗೆ ಕರ್ನಾಟಕದಲ್ಲೂ ಸಹ ಹೊಸ ತಳಿ ಆತಂಕ ಸೃಷ್ಟಿಸಿದೆ. ಕರ್ನಾಟಕದಲ್ಲಿ ಒಟ್ಟು 8 ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿದೆ. ಕೇರಳದಲ್ಲಿ 6, ತಮಿಳುನಾಡಿನಲ್ಲಿ 4 ಹಾಗೂ ತೆಲಂಗಾಣದಲ್ಲಿ 2 ಹೊಸ ಕೋವಿಡ್ ರೂಪಾಂತರಿ ಪತ್ತೆಯಾಗಿದೆ. ಅದರಲ್ಲೂ ಮಹಾರಾಷ್ಟ್ರದ್ಲಿ ಪತ್ತೆಯಾಗಿರುವ ಒಂಭತ್ತು ಪ್ರಕರಣಗಳೂ ಭಾನುವಾರವೇ ಪತ್ತೆಯಾಗಿದೆ. ಈ ಹೊಸ ರೂಪಾಂತರಿ ಮೊದಲು ಕೇರಳದಲ್ಲಿ ಪತ್ತೆಯಾಗಿದೆ. ಆದರೆ ಇಲ್ಲಿಯವರೆಗೂ 6 ಪ್ರಕರಣಗಳು ಮಾತ್ರ ಕೇರಳದಲ್ಲಿ ಪತ್ತೆಯಾಗಿದೆ. ಆದರೆ ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕದಲ್ಲಿ ಮಾತ್ರ ದಿನೇ ದಿನೇ ಪ್ರಕರಣಗಳ ಸಂಖ್ಯೆ ಏರುತ್ತಿದೆ.

ಇನ್ನೂ ದೇಶದಲ್ಲಿ ದಿನೇ ದಿನೇ ಕೋವಿಡ್ ಪಾಸಿಟೀವ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಕರ್ನಾಟಕದಲ್ಲಿ ಎರಡು ದಿನಗಳಿಂದ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಸದ್ಯ ದೇಶದಲ್ಲಿ ಕೋವಿಡ್ ಪ್ರಕರಣಗಳ ಪೈಕಿ ಕೇರಳದಲ್ಲಿ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ರಜಾದಿನಗಳು, ಹಬ್ಬಗಳು, ಹೊಸ ವರ್ಷದ ಆಚರಣೆಯ ನಿಮಿತ್ತ ಅನೇಕ ಪ್ರವಾಸಿ ತಾಣಗಳೂ ಸಹ ತುಂಬಿ ತುಳುಕುತ್ತಿದ್ದು, ಈ ಕಾರಣದಿಂದ ಭಾರತದಲ್ಲಿ ನಾಲ್ಕನೇ ಅಲೆ ಎದುರಾಗುತ್ತಾ ಎಂಬ ಅನುಮಾನಗಳು ಮೂಡಿದೆ. ಇನ್ನೂ ಈ ಹೊಸ ತಳಿ ಅಷ್ಟೊಂದು ಅಪಾಯವಲ್ಲ. ಆದರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಂತಹವರು ಎಚ್ಚರಿಕೆ ವಹಿಸುವುದು, ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಎಂದು ತಜ್ಞರು ಸೂಚನೆ ನೀಡಿದ್ದಾರೆ.

Most Popular

To Top