ಮೋದಿಗೆ ವೋಟ್ ಹಾಕಿ, ನನಗೆ ಗಿಫ್ಟ್ ಬೇಡ, ಲಗ್ನಪತ್ರಿಕೆಯ ಮೂಲಕ ಮೋದಿಗೆ ವೋಟ್ ಹಾಕಲು ಮನವಿ…..!

Follow Us :

ಸದ್ಯ ದೇಶದಲ್ಲಿ ಲೋಕಸಭಾ ಚುನಾವಣೆಯ ಪ್ರಕ್ರಿಯೆ ಶುರುವಾಗಿದ್ದು, ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಮತ ಪಡೆಯಲು ರಾಜಕೀಯ ಪಕ್ಷಗಳು ಮತದಾರರನ್ನು ಮತಕ್ಕಾಗಿ ಆಮಿಷವೊಡ್ಡುವುದು, ಭರವಸೆ ನೀಡುವುದು, ಉಡುಗೊರೆಗಳನ್ನು ಕೊಡುವುದನ್ನು ನೋಡಿರುತ್ತೇವೆ. ಆದರೆ ಇಲ್ಲಿ ಯುವಕನೋರ್ವ ತನ್ನ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ನನಗೆ ಗಿಫ್ಟ್ ಬೇಡ, ಮೋದಿಗೆ ವೋಟ್ ಹಾಕಿ ಎಂದು ಮುದ್ರಿಸಿದ್ದು, ಲಗ್ನ ಪತ್ರಿಕೆ ಸೋಷಿಯಲ್ ಮಿಡಿಯಾದಲ್ಲಿ ಪುಲ್ ವೈರಲ್ ಆಗುತ್ತಿದೆ.

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಕಂಡಿ ತಾಲೂಕಿನ ಅರುಟ್ಟಾ ಗ್ರಾಮದ ನಂದಿಕಾಂತಿ ಸಾಯಿಕುಮಾರ್‍ ಎಂಬ ಯುವಕನ ಮದುವೆ ಇದೇ ಏ.4 ರಂದು ನೆರವೇರಲಿದೆ. ಈ ಸಂಬಂಧ ಸಂಬಂಧಿಕರು ಹಾಗೂ ಸ್ನೇಹಿತರನ್ನು ಆಹ್ವಾನಿಸುವ ನಿಟ್ಟಿನಲ್ಲಿ ಲಗ್ನ ಪತ್ರಿಕೆಯನ್ನು ಮುದ್ರಿಸಿದ್ದಾರೆ. ಮದುವೆಯ ಪತ್ರಿಕೆಯ ಮೇಲೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಪೊಟೊ ಮುದ್ರಿಸಿ ಮತ ಹಾಕಿ ಎಂದು ಮನವಿ ಮಾಡಿದ್ದಾರೆ. ನನ್ನ ಮದುವೆಗೆ ನೀವು ಕೊಡುವ ಉಡುಗೊರೆ ನರೇಂದ್ರ ಮೋದಿಜಿಗೆ ನಿಮ್ಮ ಮತ ಹಾಕಿ ಎಂದು ಬರೆದಿದ್ದಾರೆ. ಆಹ್ವಾನ ಪತ್ರಿಕೆಯಲ್ಲೂ ಜೈಶ್ರೀರಾಮ್ ಎಂದು ಮುದ್ರಿಸಲಾಗಿದೆ. ಇಡೀ ದೇಶದಾದ್ಯಂತ ಲೋಕಸಭಾ ಚುನಾವಣೆ ನಡೆಯುತ್ತಿದೆ. ಈ ಸಮಯದಲ್ಲಿ ನನ್ನ ಮದುವೆ ಬಂದವರು ನನಗೆ ಉಡುಗೊರೆ ಬೇಡ, ಬಿಜೆಪಿಗೆ ಮತ ಕೊಟ್ಟು ಮೋದಿಯನ್ನು ಮತ್ತೆ ಪ್ರಧಾನಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇನ್ನೂ ಈ ವಿಶೇಷ ಆಹ್ವಾನ ಪತ್ರಿಕೆ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವರ ಸಾಯಿಕುಮಾರ್‍ ಮೋದಿ ಪೊಟೋ ಹಾಗೂ ಪೋಷಕರ ಹೆಸರು ಹಾಗೂ ದೂರವಾಣಿ ಸಂಖ್ಯೆಗಳನ್ನು ಕಾರ್ಡ್ ನಲ್ಲಿ ಸ್ಪಷ್ಟವಾಗಿ ಮುದ್ರಿಸಿದ್ದಾರೆ. ನೀತಿ ಸಂಹಿತೆ ಜಾರಿಯಿರುವ ಸಮಯದಲ್ಲಿ ಈ ರೀತಿ ಮಾಡಬಹುದೇ ಎಂದು ಇತರೆ ಪಕ್ಷಗಳ ಮುಖಂಡರೂ ಸಹ ಪ್ರಶ್ನಿಸುತ್ತಿದ್ದಾರೆ. ಇನ್ನೂ ಸಾಯಿಕುಮಾರ್‍ ರವರ ಮನೆಯಲ್ಲಿ ಈ ಹಿಂದೆ ತನ್ನ ಇಬ್ಬರು ಹೆಣ್ಣು ಮಕ್ಖಳ ಮದುವೆಗಳನ್ನು ಮಾಡಲಾಗಿತ್ತು. ಆದರೆ ಈ ರೀತಿಯಲ್ಲಿ ಈ ಹಿಂದೆ ವಿನಂತಿ ಮಾಡಿರಲಿಲ್ಲ ಇದೀಗ ಸಾಯಿಕುಮಾರ್‍ ತಮ್ಮ ಮದುವೆಯಲ್ಲಿ ಈ ರೀತಿಯಲ್ಲಿ ಮನವಿ ಮಾಡಿರುವುದು ಅನೇಕರ ಅಚ್ಚರಿಗೆ ಕಾರಣ ಸಹ ಆಗಿದೆ.