ಅಯೋಧ್ಯೆಯಿಂದ ಬೆಂಗಳೂರಿಗೆ ಬಂದ ಬಾಲ ರಾಮನ ವಿಗ್ರಹ ಕೆತ್ತಿದ ಅರುಣ್ ಯೋಗಿರಾಜ್, ಭವ್ಯ ಸ್ವಾಗತ ಕೋರಿದ ರಾಮ ಭಕ್ತರು….!

Follow Us :

ಭಾರತ ದೇಶ ಮಾತ್ರವಲ್ಲದೇ ಇಡೀ ವಿಶ್ವದ ಅನೇಕ ದೇಶಗಳಲ್ಲಿ ಜ.22 ರಂದು ರಾಮೋತ್ಸವ ನಡೆದಿದೆ. ಜ.22 ರಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಟೆ ನಡೆದಿದೆ. ಈ ರಾಮನ ವಿಗ್ರಹವನ್ನು ಕರ್ನಾಟಕದ ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತನೆ ಮಾಡಿದ್ದಾರೆ. ಈ ನಗುಮೊಗದ ಬಾಲ ರಾಮ ಮೂರ್ತಿ ಎಲ್ಲರನ್ನೂ ಸೆಳೆದುಕೊಂಡಿದೆ. ಇದೀಗ ಅಯೋಧ್ಯೆಯಿಂದ ಬೆಂಗಳೂರಿಗೆ ಬಂದ ಅರುಣ್ ಯೋಗಿರಾಜ್ ರವರನ್ನು ರಾಮ ಭಕ್ತರು ಆರತಿ ಬೆಳಗಿ, ಹೂಗುಚ್ಛ ನೀಡಿ ಭವ್ಯ ಸ್ವಾಗತ ಕೋರಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣಗೊಂಡಿರುವ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಟೆಯಾದ ಬಾಲ ರಾಮನ ವಿಗ್ರಹವನ್ನು ಕೆತ್ತಿದಂತಹ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅಯೋಧ್ಯೆಯಿಂದ ನೇರವಾಗಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅಲ್ಲಿಂದ ಬರುತ್ತಿದ್ದಂತೆ ಅರುಣ್ ರವರ ತಾಯಿ ಹಾಗೂ ಪತ್ನಿ ಅಪ್ಪಿಕೊಂಡು ಸ್ವಾಗತಿಸಿದ್ದಾರೆ. ಈ ವೇಳೆ ಮಗನನ್ನು ಕಂಡ ತಾಯಿ ಮುದ್ದಾಡಿ ಭಾವುಕರಾಗಿದ್ದಾರೆ. ಆನಂದ ಭಾಷ್ಪ ಸುರಿಸಿದ್ದಾರೆ. ನಂತರ ಅರುಣ್ ಯೋಗಿರಾಜ್ ತನ್ನ ಇಬ್ಬರೂ ಮಕ್ಕಳನ್ನು ಎತ್ತಿಕೊಂಡು ಮುದ್ದಾಡಿದ್ದಾರೆ. ವಿಮಾನ ನಿಲ್ದಾಣದ ಟರ್ಮಿನಲ್-2 ರ ಮುಂದೆ ಸಾಲಾಗಿ ನಿಂತ ರಾಮ ಭಕ್ತರು ಅರುಣ್ ಗೆ ಭವ್ಯ ಸ್ವಾಗತ ಕೋರಿದ್ದಾರೆ. ಈ ವೇಳೆ ಆರತಿ ಬೆಳಗಿ, ಹೂಗುಚ್ಛ ನೀಡಿ ಭವ್ಯ ಸ್ವಾಗತ ಕೋರಿದ್ದಾರೆ. ಈ ಸಮಯದಲ್ಲಿ ಟರ್ಮಿನಲ್ ಬಳಿ ನೂಕು ನುಗ್ಗಲು ಸಹ ಉಂಟಾಗಿತ್ತು.

ಬಳಿಕ ವಿಮಾನ ನಿಲ್ದಾಣದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್, ಸುಮಾರು 7 ತಿಂಗಳಿನಿಂದ ಶ್ರಮಪಟ್ಟು ವಿಗ್ರಹ ಕೆತ್ತನೆ ಮಾಡಿದ್ದೇನೆ. ಶ್ರೀರಾಮನೇ ನನ್ನಿಂದ ಕೆತ್ತನೆ ಮಾಡಿಸಿಕೊಂಡಿದ್ದಾರೆ. ರಾಮನ ಮಂದಿರಕ್ಕೆ 200 ಕೆಜಿ ಚಿನ್ನ ಕೊಡಲು ಸಹ ಭಕ್ತರು ಸಿದ್ದರಿದ್ದರು. ಆದರೆ ಮೈಸೂರಿನ ಸಣ್ಣ ಗ್ರಾಮದ ರೈತನ ಜಮೀನಿನಲ್ಲಿ ಸಿಕ್ಕ ಶಿಲೆ ಇದೀಗ ರಾಮನಾಗಿದೆ. ಇದು ನಮ್ಮ ಕರುನಾಡಿಗೆ ಹೆಮ್ಮೆ ಹಾಗೂ ಗೌರವ ವಿಚಾರವಾಗಿದೆ. ರಾಮನ ವಿಗ್ರಹ ಕೆತ್ತನೆ ಮಾಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಪೂರ್ವಜನ್ಮದ ಪುಣ್ಯ ಎಂದೇ ಹೇಳುತ್ತೇನೆ. ಸಣ್ಣ ಹಳ್ಳಿಯಿಂದ ಬಂದ ನನಗೆ ಉತ್ತಮ ಅವಕಾಶ ಸಿಕಿದ್ದು ತುಂಬಾನೆ ಖುಷಿಯ ವಿಚಾರವಾಗಿದೆ. ಈ ದೊಡ್ಡ ಅವಕಾಶ ಸಿಕ್ಕಿದ್ದಕ್ಕೆ ನಮ್ಮ ಮನೆತನ, ಗುರುಗಳಿಗೆ ಧನ್ಯವಾದ. ನಾನು ಕೆತ್ತನೆ ಮಾಡಿದ ರಾಮನ ವಿಗ್ರಹ ಇಂದು ಕೋಟ್ಯಂತರ ರಾಮ ಭಕ್ತರಿಗೆ ಇಷ್ಟವಾಗಿದೆ. ಓರ್ವ ಶಿಲ್ಪಿಗೆ ಇದಕ್ಕಿಂದ ದೊಡ್ಡ ಖುಷಿ ಬೇರೊಂದಿಲ್ಲ ಎಂದು ತಿಳಿಸಿದ್ದಾರೆ.