ಖಲಿಸ್ತಾನ್ ಉಗ್ರನಿಂದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ರವರಿಗೆ ಕೊಲೆ ಬೆದರಿಕೆ……!

Follow Us :

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರನ್ನು ಕೊಲೆ ಮಾಡುವುದಾಗಿ ಖಲಿಸ್ತಾನಿ ಉಗ್ರ ನಿಷೇಧಿತ ಸಿಕ್ಸ್ ಫಾರ್‍ ಜಸ್ಟಿಸ್ ಸಂಘಟನೆಯ ನಾಯಕ ಗುರಪತ್ವಂತ್ ಸಿಂಗ್ ಪನ್ನು ಬೆದರಿಕೆ ಹಾಕಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮನ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯವನ್ನು ಎಸಗುವುದಾಗಿ ಆಡಿಯೋ ಮೂಲಕ ಪನ್ನು ಬೆದರಿಕೆಯೊಡ್ಡಿದ್ದಾನೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಮಹೋತ್ಸವದ ಕಾರ್ಯಕ್ರಮಗಳು ಭರದಿಂದ ಸಾಗುತ್ತಿವೆ. ಈ ನಡುವೆ ಅಲ್ಲಿನ ಭದ್ರತೆಯ ಬಗ್ಗೆ ಸಹ ಅಲ್ಲಿನ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲೆ ಇತ್ತೀಚಿಗಷ್ಟೆ ಅಯೋಧ್ಯೆಯಲ್ಲಿ ಮೂವರು ಶಂಕಿತ ಖಲಿಸ್ತಾನಿಗಳನ್ನು ಯುಪಿ ಎಟಿಎಸ್ ಬಂಧನ ಮಾಡಿದೆ. ಈ ಕಾರಣದಿಂದ ಕೋಪಗೊಂಡ ಪನ್ನು ಸಿಎಂ ಯೋಗಿ ಯವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟೇಅಲ್ಲದೇ ಪ್ರಾಣ ಪ್ರತಿಷ್ಟಾ ಕಾರ್ಯಕ್ರಮವನ್ನು ನಾಶ ಮಾಡುವುದಾಗಿಯೂ ಸಹ ತಿಳಿಸಿದ್ದಾನೆ. ತನ್ನ ಮೂರು ಸಹುದ್ಯೋಗಿಗಳಿಗೆ ಅನಗತ್ಯ ಕಿರುಕುಳ ನೀಡಬಾರದು ಎಂದು ಹೇಳಿದ್ದಾರೆ. ಯುಕೆಗೆ ಸೇರಿದ ಪೋನ್ ನಂಬರ್‍ ಮೂಲಕ ರೆಕಾರ್ಡ್ ಸಂದೇಶ ಬಂದಿದೆ ಎಂದು ಹೇಳಲಾಗಿದೆ.

ಇನ್ನೂ ಪನ್ನು ಕಳುಹಿಸಿರುವ ರೆಕಾರ್ಡ್‌ನಲ್ಲಿ, ಉತ್ತರ ಪ್ರದೇಶದ ಪೊಲೀಸರು ಮೂವರನ್ನು ಬಂಧಿಸಿ ಅವರ ವಿರುದ್ದ ಸುಳ್ಳು ಪ್ರಕರಣಗಳನ್ನು ದಾಖಲು ಮಾಡುತ್ತಿದ್ದಾರೆ, ಅವರಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ರಾಮಲಲ್ಲಾ ಪ್ರಾಣ ಪ್ರತಿಷ್ಟಾ ಕಾರ್ಯಕ್ರಮವನ್ನು ಯಾರೂ ಉಳಿಸೋಕೆ ಆಗೋಲ್ಲ. ಜ.22 ರಂದು ನಮ್ಮ ಸಿಕ್ಸ್ ಫಾರ್‍ ಜಸ್ಟಿಸ್ ಸಂಘಟನೆ ಉತ್ತರ ನೀಡುತ್ತದೆ. ಅಂದು ನಾವು ಸಿಎಂ ಯೋಗಿ ರವರನ್ನು ರಾಜಕೀಯವಾಗಿ ಹತ್ಯೆ ಮಾಡುತ್ತೇವೆ ಎಂದು ರೆಕಾರ್ಡ್ ಮೂಲಕ ತಿಳಿಸಿದ್ದಾನೆ. ಕಳೆದ ಗುರುವಾರ ಸಂಜೆ ಯುಪಿ ಪೊಲೀಸರು ಎಟಿಎಸ್ ಗೌಪ್ಯ ಮಾಹಿತಿಯ ಆಧಾರದ ಮೇಲೆ ಅಯೋದ್ಯೆಯಲ್ಲಿ ಮೂವರು ಅನುಮಾನಾಸ್ಪದ ಯುವಕರನ್ನು ಬಂಧಿಸಿತ್ತು. ಈ ಮೂರು ಮಂದಿ ಆರ್ಶ್ ದಲಾ ಗ್ಯಾಂಗ್ ಸದಸ್ಯರು ಎಂದು ಹೇಳಲಾಗಿದೆ. ಈ ಹಿಂದೆ ಸಹ ಪಂಜಾಬ್ ಸಿಎಂ ರವರನ್ನು ಕೊಲೆ ಮಾಡುವ ಎಚ್ಚರಿಕೆಯನ್ನು ಸಹ ಪನ್ನು ಹಾಕಿದ್ದ.