News

ವಸತಿ ಶಾಲೆಯಲ್ಲಿ ಅಮಾನವೀಯ ಘಟನೆ, ಬಾಲಕಿ ಬಟ್ಟೆ ಬದಲಿಸುವ ವಿಡಿಯೋ ರೆಕಾರ್ಡ್ ಮಾಡಿದ ಕಿಡಿಗೇಡಿಗಳು…..!

ವಸತಿ ಶಾಲೆಯಲ್ಲಿ ಓದುತ್ತಿರುವಂತಹ ಬಾಲಕಿಯೊಬ್ಬರು ಬಟ್ಟೆ ಬದಲಿಸುವ ಸಮಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟಿರುವ ಅಮಾನವೀಯ ಘಟನೆಯೊಂದು ಕರ್ನಾಟಕದ ಕೋಲಾರ ಜಿಲ್ಲೆಯ ಮಾಲೂರಿನ ಯಲುವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ ಎನ್ನಲಾಗಿದೆ. 16 ವರ್ಷದ ವಿದ್ಯಾರ್ಥಿನಿ ವಸತಿ ಶಾಲೆಯಲ್ಲಿ ಬಟ್ಟೆ ಬದಲಿಸುತ್ತಿದ್ದಾಗ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಆಕೆ ಮಾದ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾರೆ.

ಈ ಬಗ್ಗೆ ಮಾದ್ಯಮಗಳ ಮುಂದೆ ಕಣ್ಣೀರಾಕಿದ ಬಾಲಕಿ, ನಾನು ಬಟ್ಟೆ ಬದಲಿಸುವಂತಹ ವಿಡಿಯೋ ಹಾಗೂ ನಾನು ನನ್ನ ಸ್ನೇಹಿತರು ಓಡಾಡುವ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಯಾರು ಈ ವಿಡಿಯೋ ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ. ಈ ವಿಡಿಯೋ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯೊಬ್ಬರು ನನಗೆ ತೋರಿಸಿದರು. ವಿಡಿಯೋ ನೋಡಿ ನನಗೆ ಶಾಕ್ ಆಯ್ತು ಎಂದು ಬಾಲಕಿ ಅಳಲು ತೋಡಿಕೊಂಡಿದ್ದಾಳೆ. ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಸಂಬಂಧ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಮುನಿಯಪ್ಪ ಹಾಗೂ ವಾರ್ಡನ್ ಮಂಜುನಾಥ್ ರವರನ್ನು ಅಮಾನತ್ತು ಮಾಡಲಾಗಿದೆ ಎಂದು ತಿಳಿದುಬಂದಿದೆ.

ಇನ್ನೂ ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿದ್ದಾದರೂ ಯಾರು, ಈ ಹಿಂದೆ ಇರುವ ಜಾಲದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಈ ಕುರಿತು ಪೊಲೀಸ್ ಪ್ರಕರಣ ಸಹ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನೂ ವಸತಿ ಶಾಲೆ ಯಲ್ಲಿ ಸಂಪೂರ್ಣ ಬದಲಾವಣೆ ಮಾಡಲಾಗುತ್ತದೆ. ಮಕ್ಕಳು ಹಾಗೂ ಪೋಷಕರು ಯಾವುದೇ ರೀತಿಯಲ್ಲೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಕೃತ್ಯವೆಸಗಿದಂತಹ ಕಿಡಿಗೇಡಿಗಳ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

Most Popular

To Top