News

ಪಾಕಿಸ್ತಾನ ಕ್ರಿಕೆಟಿಗನ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ತಪ್ಪು ಎಂದ ಉದಯನಿಧಿ ಸ್ಟಾಲಿನ್, ಕೌಂಟರ್ ಕೊಟ್ಟ ಅಣ್ಣಾಮಲೈ….!

ಕೆಲವು ದಿನಗಳ ಹಿಂದೆಯಷ್ಟೆ ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಭಾರಿ ವಿರೋದಕ್ಕೆ ಗುರಿಯಾದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲೀನ್ ಇದೀಗ ಮತ್ತೊಂದು ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಕಳೆದೆರಡು ದಿನಗಳ ಹಿಂದೆಯಷ್ಟೆ ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆದ ವರ್ಲ್ಡ್ ಕಪ್ ಟೂರ್ನಿಯ ಮ್ಯಾಚ್ ನಲ್ಲಿ ಭಾರತ ಭರ್ಜರಿ ಗೆಲುವು ಕಂಡಿದೆ. ಈ ವೇಳೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನದ ಕ್ರಿಕೆಟಿಗನ ಮುಂದೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ಸರಿಯಲ್ಲ ಎಂದು ಉದಯನಿಧಿ ಹೇಳಿದ್ದು, ಅದಕ್ಕೆ ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಖಡಕ್ ಕೌಂಟರ್‍ ಕೊಟ್ಟಿದ್ದಾರೆ.

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅ.14 ರಂದು ನಡೆದ ಭಾರತ-ಪಾಕಿಸ್ತಾನ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿಯಾಗಿ ಜಯಗಳಿಸಿದ್ದು, ಇಡೀ ಭಾರತವೇ ಸಂಭ್ರಮಿಸಿದೆ. ಅನೇಕ ಕಡೆ ಪಟಾಕಿ ಸಿಡಿಸಿ ಅದ್ದೂರಿಯಾಗಿಯೇ ಸಂಭ್ರಮಿಸಿದ್ದಾರೆ. ಜೊತೆಗೆ ಕ್ರೀಡಾಗಣದ ಕೆಲವೊಂದು ವಿಡಿಯೋಗಳೂ ಸಹ ವೈರಲ್ ಆಗುತ್ತಿವೆ. ಈ ವಿಡಿಯೋಗಳಲ್ಲಿ ಪಾಕಿಸ್ತಾನ ಬ್ಯಾಟ್ಸ್ ಮೆನ್ ಮೊಹಮ್ಮದ್ ರಿಜ್ವಾನ್ ಔಟಾಗಿ ವಾಪಸ್ಸು ಹೋಗುತ್ತಿದ್ದಾಗ ಅಲ್ಲಿ ನೆರೆದಿದ್ದ ಅಭಿಮಾನಿಗಳು ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ರಿಯಾಕ್ಟ್ ಆಗಿದ್ದಾರೆ. ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನ ಕ್ರಿಕೆಟಿಗನ ಮುಂದೆ ಜೈ ಶ್ರೀರಾಮ್ ಘೋಷಣೆ ಸರಿಯಲ್ಲ, ಅದು ಕ್ರೀಡಾ ಮನೋಭಾವವಲ್ಲ. ದ್ವೇಷ ಹರಡುವಂತಹ ಸಂಸ್ಕೃತಿಯಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಈ ಕುರಿತು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಕೌಂಟರ್‍ ಕೊಟ್ಟಿದ್ದಾರೆ. ಭಾರತ ದೇಶ ಪಾಕಿಸ್ತಾನ ತಂಡಕ್ಕೆ ಪ್ರತಿ ಭಾರಿ ಗೌರವ ನೀಡಿದೆ. ಅದರಲ್ಲಿ ಕೊಂಚವೂ ಕಡಿಮೆಯಾಗಿಲ್ಲ. ಕ್ರೀಡೆಯನ್ನು ಕ್ರೀಡೆಯಾಗಿ ನೋಡಿ  ಎಂದು ನೀವು ಹೇಳಿದ್ದೀರಾ. ಅದೇ ರೀತಿ ಧರ್ಮವನ್ನು ಧರ್ಮವನ್ನಾಗಿ ನೋಡಿ. ಮತ್ಯಾಕೆ ಸನಾತನ ಧರ್ಮವನ್ನು ನಾಶ ಮಾಡಲು ಹೊರಟ್ಟಿದ್ದೀರಿ. ಚೆನೈ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ 13 ರನ್ ಗಳಿಂದ ಗೆದ್ದಾಗ ಭಾರತೀಯ ಅಭಿಮಾನಿಗಳು ಎದ್ದು ನಿಂತು ಪ್ರಶಂಸೆ ನೀಡಿದ್ದರು. ಅದೇ ರೀತಿ ಹೈದರಾಬಾದ್ ಹಾಗೂ ಅಹಮದಾಬಾದ್ ನಲ್ಲೂ ಪಾಕಿಸ್ತಾನ ತಂಡಕ್ಕೆ ಅದ್ದೂರಿ ಸ್ವಾಗತ ಕೋರಲಾಗಿತ್ತು. ಪಾಕಿಸ್ತಾನ ಆಟಗಾರರು ಹೋಗುವ ವೇಳೆ ಶ್ರೀರಾಮ ಘೋಷಣೆ ಕೂಗಿದರೇ ತಪ್ಪೇನು. ಅಭಿಮಾನಿಗಳು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ. ಒತ್ತಾಯ ಹೇರಿಲ್ಲ. ಆದರೆ ತಾವು ಅದನ್ನು ರಾಜಕೀಯ ಮಾಡುವ ಮಟ್ಟಕ್ಕೆ ಇಳಿಯುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಣ್ಣಾಮಲೈ ಕೌಂಟರ್‍ ಕೊಟ್ಟಿದ್ದಾರೆ.

Most Popular

To Top