News

ಪೊಲೀಸರ ಮಿಂಚಿನ ಕಾರ್ಯಾಚರಣೆ, ಕಳೆದು ಹೋಗಿದ್ದ ಪುಟ್ಟ ಕಂದಮ್ಮನನ್ನು ಅಮ್ಮನ ಮಡಿಲಿಗೆ ಸೇರಿಸಿದ ಪೊಲೀಸರು….!

ನಿನ್ನೆಯಷ್ಟೆ ಕೋಲಾರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 5 ದಿನಗಳ ಪುಟ್ಟ ಕಂದಮ್ಮನನ್ನು ಮೂರ ಮಹಿಳೆಯರು ಕದ್ದು ಪರಾರಿಯಾಗಿದ್ದರು. ಈ ದೃಶ್ಯ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಡಲೇ ಮಿಂಚಿನ ಕಾರ್ಯಾಚರಣೆ ನಡೆಸಿದ ಕಳೆದಹೋಗಿದ್ದ ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮಾಲೂರಿನ ಪಟೇಲ ಪಟ್ಟಣದ ನಂದಿನಿ ಹಾಗೂ ಪೂವರಸನ್ ಎಂಬ ದಂಪತಿ ಕೋಲಾರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಹೆರಿಗೆಗಾಗಿ ಬಂದಿದ್ದರು. ಮಗು ಜನಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಈ ವೇಳೆ ಮಗುವನ್ನು ಆಟವಾಡಿಸುವ ಸೋಗಿನಲ್ಲಿ ಮಹಿಳೆಯರು ಕಳ್ಳತನ ಮಾಡಿದ್ದಾರೆ. ಮಗುವನ್ನು ಬ್ಯಾಗ್ ನಲ್ಲಿಟ್ಟುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು 24 ಗಂಟೆ ಕಳೆಯುವುದರೊಳಗೆ ಕಳುವಾಗಿ ಮಗುವನ್ನು ಪತ್ತೆ ಹಚ್ಚಿ ತಾಯಿಯ ಮಡಿಲಿಗೆ ಮಗುವನ್ನು ಒಪ್ಪಿಸಿದ್ದಾರೆ.

ಇನ್ನೂ ಬಂಧಿತ ಮಹಿಳೆಯನ್ನು ಸ್ವಾತಿ ಎಂದು ಗುರ್ತಿಸಲಾಗಿದೆ. ಕಳ್ಳತನ ಮಾಡಿದ್ದ ಮಗುವನ್ನು ತಮಿಳುನಾಡಿಗೆ ರವಾನಿಸಲು ಪ್ಲಾನ್ ಸಹ ಮಾಡಿದ್ದಳಂತೆ. ಸ್ವಾತಿ ಜೊತೆಗೆ ಇದ್ದಂತಹ ಇನ್ನಿಬ್ಬರು ಎಸ್ಕೇಪ್ ಆಗಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಕೋಲಾರದ ಎಪಿಎಂಸಿ ಬಳಿ ಆರೋಪಿ ಸ್ವಾತಿ ಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿ ಸ್ವಾತಿಯನ್ನು ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ. ಪ್ರಕರಣ ದಾಖಲಾದ 24 ಗಂಟೆಗಳೊಳಗೆ ಆರೋಪಿಯನ್ನು ಹಿಡಿದು ಮಗುವನ್ನು ರಕ್ಷಣೆ ಮಾಡಿದ ಪೊಲೀಸರಿಗೆ ಸಿಎಂ ಸಿದ್ದರಾಮಯ್ಯ ರವರು ಸೋಷಿಯಲ್ ಮಿಡಿಯಾ ಮೂಲಕ ಅಭಿನಂದನೆ ತಿಳಿಸಿದ್ದಾರೆ.

Most Popular

To Top