ಬ್ಯಾರಿಕೇಡ್ ಹೊರನಿಂತು ಮೋದಿಗೆ ಕೈ ಬೀಸಿದ ಬಿಜೆಪಿ ನಾಯಕರು, ವೈರಲ್ ಆದ ಪೊಟೋ….!

Follow Us :

ಚಂದ್ರಯಾನ 3 ಯಶಸ್ವಿ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಇಂದು (ಆ.26) ಮೋದಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಮೋದಿ ಭೇಟಿಗೆ ಅವಕಾಶ ಸಿಗದ ಕಾರಣದಿಂದ ಬಿಜೆಪಿ ನಾಯಕರು ಬ್ಯಾರಿಕೇಡ್ ಹೊರಗೆ ನಿಂತು ಸಾಮಾನ್ಯ ಸಾರ್ವಜನಿಕರಂತೆ ಮೋದಿಯವರಿಗೆ ಕೈಬೀಸಿದ ಪೊಟೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೆಲ ಕಾಂಗ್ರೇಸ್ ನಾಯಕರು ಬಿಜೆಪಿ ನಾಯಕರ ಬಗ್ಗೆ ವ್ಯಂಗವಾಡಿದ್ದಾರೆ.

ಇಂದು ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಆಗಮಿಸಿದ್ದರು. ಮೋದಿ ಹೋಗುವ ದಾರಿಯಲ್ಲಿ ಅನೇಕ ಸಾರ್ವಜನಿಕರು, ಮೋದಿ ಅಭಿಮಾನಿಗಳು ರಸ್ತೆಗಳ ಬದಿಯಿರುವ ಬ್ಯಾರಿಕೇಡ್ ಬಳಿ ನಿಂತಿದ್ದರು. ಈ ವೇಳೆ ಮೋದಿ ಯವರಿಗೆ ಶುಭ ಕೋರಲು ಸಾಮಾನ್ಯರಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‍ ಕಟೀಲ್, ಮಾಜಿ ಸಚಿವರಾದ ಆರ್‍.ಆಶೋಕ್, ಮುನಿರತ್ನ, ಕೆ.ಗೋಪಾಲಯ್ಯ ಸಹ ಬ್ಯಾರಿಕೇಡ್ ಹೊರಗೆ ನಿಂತು ಪ್ರಧಾನಿಯವರಿಗೆ ಕೈ ಬೀಸಿದ್ದಾರೆ. ಅದರಲ್ಲೂ ಮುನಿರತ್ನ ರವರು ಬ್ಯಾರಿಕೇಡ್ ಹತ್ತಿ ಪ್ರಧಾನಿಗೆ ಕೈ ಬೀಸಿದ್ದಾರೆ. ಸದ್ಯ ಈ ಪೊಟೋ ಸೋಷಿಯಲ್ ಮಿಡಿಯಾಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕಾಂಗ್ರೇಸ್ ನಾಯಕರುಗಳು ತಮ್ಮದೇ ಆದ ರೀತಿಯಲ್ಲಿ ವ್ಯಂಗವಾಡುತ್ತಿದ್ದಾರೆ.

ಈ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಆಗಮಿಸಿದ್ದ ಮೋದಿಯವರನ್ನು ಸ್ವಾಗತಿಸಲು ಸ್ವತಃ ರಾಜ್ಯ ಬಿಜೆಪಿ ನಾಯಕರಿಗೂ ಸಹ ಅವಕಾಶ ಕೊಟ್ಟಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‍ ಕಟೀಲ್, ಬೊಮ್ಮಾಯಿಯವರನ್ನು ಸಹ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ರಾಜ್ಯದ ಬಿಜೆಪಿ ನಾಯಕರಿಗೆ ಇದಕ್ಕಿಂತ ಅಪಮಾನವುಂಟೆ? ಬಿಜೆಪಿ ನಾಯಕರಿಗೆ ಕೊಂಚ ಆದರೂ ಆತ್ಮಗೌರವ ಬೇಡವೇ? ರಾಜ್ಯ BJP ನಾಯಕರನ್ನು ಅವರ ಪಕ್ಷದ ವರಿಷ್ಟರು ಕಾಲಕಸಕ್ಕಿಂತ ಕಡೆಯಾಗಿ ನೋಡುತ್ತಾರೆ ಎಂಬುದಕ್ಕೆ‌ ಮೋದಿಯವರ ಇಂದಿನ ವರ್ತನೆಯೇ ಸಾಕ್ಷಿ. ನಾಯಕರು ಇಂದು ಮೋದಿಯವರ ಮುಂದೆ ಹಲ್ಲುಗಿಂಜಿ ಜೀ ಹುಜೂರು ಎಂದು ಮಂಡಿಯೂರಿ ನಿಂತರೂ, ಮೋದಿಯವರು ಕಣ್ಣೆತ್ತಿಯೂ ನೋಡಿಲ್ಲ. ಮೋದಿಯವರ ಸರ್ವಾಧಿಕಾರಿ ‌ಮನಃಸ್ಥಿತಿಯ ಬಗ್ಗೆ ಸತ್ಯ ಹೇಳಿದಾಗಲೆಲ್ಲಾ ರಾಜ್ಯದ ಬಿಜೆಪಿಯವರು ಎಗರೆಗರಿ ಬೀಳುತ್ತಿದ್ದರು. ಬಹುಶಃ ರಾಜ್ಯ BJP ನಾಯಕರಿಗೆ ಇಂದು ಮೋದಿಯವರ ಸರ್ವಾಧಿಕಾರಿ ಮನೋಭಾವದ ಸತ್ಯದರ್ಶನವಾಗಿರಬಹುದು‌. BJP ನಾಯಕರೆ, ಇನ್ನೆಷ್ಟು ದಿನ ಆತ್ಮಗೌರವ, ಸ್ವಾಭಿಮಾನ ಕಳೆದುಕೊಂಡು ಇರುತ್ತೀರಿ? ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೂ ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಸಹ ಟ್ವೀಟ್ ಮಾಡಿದ್ದಾರೆ. ರಾಜಕೀಯವಾಗಿ, ಸೈದ್ದಂತಿಕವಾಗಿ ವಿರೋಧಿಗಳಾಗಿದ್ದರೂ ರಾಜ್ಯ ಬಿಜೆಪಿ ನಾಯಕರ ದುರಾವಸ್ಥೆ ನೋಡಿ ಕರುಣೆ ಹುಟ್ಟುತ್ತಿದೆ! ಪ್ರಧಾನಿ ಮುಂದೆ ಬ್ಯಾರಿಕೆಡ್ ಬಂಧಿಗಳಾಗಿ ಗಮನ ಸೆಳೆಯಲು ಹರಸಾಹಸ ಮಾಡುತ್ತಿರುವ ಬಿಜೆಪಿ ನಾಯಕರು ಸ್ವಾಭಿಮಾನ, ಆತ್ಮಗೌರವವನ್ನು ಬೀದಿಪಾಲು ಮಾಡಿಕೊಂಡಿದ್ದು ಕರುಣಾಜನಕವಾಗಿದೆ. ಹೈಕಮಾಂಡ್‌ನಿಂದ ಇಷ್ಟೊಂದು ತಿರಸ್ಕಾರಕ್ಕೆ ಒಳಪಟ್ಟಿರುವಾಗ “ವಿರೋಧ ಪಕ್ಷದ ನಾಯಕ”ನ ಆಯ್ಕೆ ಸಾಧ್ಯವಾಗುವುದೇ? “ಈಗ ಸ್ವತಃ ಬಿಜೆಪಿಗರೂ ಸರ್ವಾಧಿಕಾರದ ಸಂತ್ರಸ್ತರಾಗಿದ್ದಾರೆ” ಬೀದಿಯಲ್ಲಿ ನಿಂತ ಬಿಜೆಪಿ ನಾಯಕರು ತಮ್ಮನ್ನು ತಾವೇ ಅವಮಾನಿಸಿಕೊಂಡಿದ್ದಲ್ಲ, ಇದು ಮತ ನೀಡಿದ ಮತದಾರರಿಗೆ ಅವಮಾನ, ಕನ್ನಡಿಗರಿಗೆ ಅವಮಾನ, ಕಾರ್ಯಕರ್ತರಿಗೆ ಅವಮಾನ ಎಂದು ಟ್ವೀಟ್ ಮಾಡಿದ್ದಾರೆ.