Film News

ದಲಿತರ ಭಾವನೆಗಳಿಗೆ ಧಕ್ಕೆ ತರುವ ಗಾದೆ ಹೇಳಿದ ಉಪ್ಪಿ, ದಲಿತ ಸಂಘಟನೆಗಳ ಪ್ರತಿಭಟನೆ, ದೂರು ದಾಖಲು…..!

ಸ್ಯಾಂಡಲ್ ವುಡ್ ನಟ ಹಾಗೂ ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಸೋಷಿಯಲ್ ಮಿಡಿಯಾದಲ್ಲಿ ಲೈವ್ ನಲ್ಲಿ ದಲಿತ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗುವಂತಹ ಗಾದೆಯೊಂದನ್ನು ಬಳಸಿದ್ದು, ಅವರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಅನೇಕ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ನಟ ಉಪೇಂದ್ರ ತಾವು ಸ್ಥಾಪಿಸಿದ ಉತ್ತಮ ಪ್ರಜಾಕೀಯ ಪಕ್ಷ ಸ್ಥಾಪನೆಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಜಾಕೀಯ ದಿನ ಆಚರಣೆ ಮಾಡಿದ್ದಾರೆ. ಈ ವೇಳೆ ಸೋಷಿಯಲ್ ಮಿಡಿಯಾದಲ್ಲಿ ಉಪ್ಪಿ ಲೈವ್ ಬಂದಿದ್ದು, ಕೆಲವೊಂದು ವಿಚಾರಗಳನ್ನು ಮಾತನಾಡಿದ್ದರು. ಈ ವೇಳೆ ಅಸೂಕ್ಷ್ಮತೆಯಿಂದ ಗಾದೆಯೊಂದನ್ನು ಬಳಸಿ ದಲಿತರ ಆಕ್ರೋಷಕ್ಕೆ ಕಾರಣರಾಗಿದ್ದಾರೆ. ಲೈವ್ ನಲ್ಲಿ ಮಾತನಾಡಿದ ಉಪ್ಪಿ, ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಕೆಲವೊಂದು ಪಕ್ಷಗಳ ಅಭ್ಯರ್ಥಿಗಳಿಗಿಂತ ಪ್ರಚಾರವಿಲ್ಲದೇ ಹೆಚ್ಚು ಮತಗಳನ್ನು ಪಡೆದುಕೊಂಡಿರುವುದಾಗಿ ಹೇಳಿದ್ದರು. ಬಳಿಕ ಯಾವುದೋ ಮಾತಿಗೆ ಊರೆಂದರೇ ಹೊಲೆಗೇರಿ ಇದ್ದೆ ಇರುತ್ತದೆ ಎಂದು ಗಾದೆಯನ್ನು ಬಳಸಿದ್ದರು. ಹೊಲೆಗೇರಿಯನ್ನು ಕಡಿಮೆಯಾಗಿ ಕಾಣುವಂತ ಗಾದೆ ಇದಾಗಿದ್ದು, ಅವರ ಮಾತಿಗೆ ಭಾರಿ ಆಕ್ರೋಷ ವ್ಯಕ್ತವಾಗಿದೆ.

ಇನ್ನೂ ಉಪ್ಪಿ ಹೇಳಿಕೆ ಖಂಡಿಸಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಧುಸೂಧನ್ ಎಂಬುವವರು ಸಿಕೆ ಅಚ್ಚು ಕಟ್ಟು ಪ್ರದೇಶ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಸಂಬಂಧ ಪ್ರಕರಣ ಸಹ ದಾಖಲು ಮಾಡಲಾಗಿದೆ. ಜೊತೆಗೆ ರಾಮನಗರದಲ್ಲೂ ಸಹ ಉಪೇಂದ್ರ ವಿರುದ್ದ ದಲಿಪತರ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ಉಪೇಂದ್ರ ರವರ ಪ್ರತಿಕೃತಿ ದಹಿಸಿ ಅವರಿಗೆ ದಿಕ್ಕಾರ ಕೂಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಉಪ್ಪಿ ವಿರುದ್ದ ಭಾರಿ ಆಕ್ರೋಷ ವ್ಯಕ್ತವಾಗುತ್ತಿದೆ. ಇನ್ನೂ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಲೈವ್ ವಿಡಿಯೋ ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ಉಪೇಂದ್ರ ಸೋಷಿಯಲ್ ಮಿಡಿಯಾ ಮೂಲಕ ಕ್ಷಮೆ ಸಹ ಕೋರಿದ್ದಾರೆ.

ಈ ಬಗ್ಗೆ ಉಪೇಂದ್ರ ತನ್ನ ಫೇಸ್ ಬುಕ್ ಖಾತೆಯಲ್ಲಿ ಕ್ಷಮೆ ಕೋರಿದ್ದಾರೆ. ಅವರ್‍ ಫೇಸ್ ಬುಕ್ ವಾಲ್ ನಲ್ಲಿ ಹಂಚಿಕೊಂಡಿರುವಂತೆ “ಇಂದು ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ನೇರ ಪ್ರಸಾರದಲ್ಲಿ ಬಾಯಿ ತಪ್ಪಿ ಒಂದು ಗಾದೆ ಮಾತನ್ನು ಬಳಸಿದ್ದು. . ಅದರಿಂದ ಹಲವರ ಭಾವನೆಗಳಿಗೆ ಧಕ್ಕೆ ಉಂಟಾಗಿರುವುದು ಕಂಡು ಬಂದ ತಕ್ಷಣವೇ ಆ ಲೈವ್ ವಿಡಿಯೋ ವನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿರುತ್ತೇನೆ.. ಮತ್ತು ಈ ಮಾತಿಗೆ ಕ್ಷಮೆಯಿರಲಿ..” ಎಂದು ಪೋಸ್ಟ್ ಮಾಡಿದ್ದಾರೆ.

ಇದರ ಜೊತೆಗೆ ಮತ್ತೊಂದು ಪೋಸ್ಟ್ ಸಹ ಹಂಚಿಕೊಂಡಿದ್ದಾರೆ. ಇಂದು ನನ್ನ ವಿರುಧ್ದ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ. 50 ವರ್ಷಗಳ ಹಿಂದೆ ನನ್ನ ಬಾಲ್ಯ ನಾನು ಎಂತಹ ಪರಿಸರದಲ್ಲಿ ಬೆಳೆದೆ.. ಆ ಬಾಲ್ಯದಲ್ಲಿ ನಾನು ಕಂಡ ಆ ಕ್ರೂರ ಬಡತನ, ನನ್ನ ಕಣ್ಣ ಮುಂದೆಯೇ ಬೆಂಕಿ ಹಚ್ಚಿಕೊಂಡು ಆದ ಆತ್ಮಹತ್ಯೆಗಳು, ಹಸಿವು, ಅಪಮಾನ, ತುಳಿತ …. ಇದನ್ನು ಅನುಭವಿಸಿ ಬೆಳೆದ ನಾನು ಇಂದು ಒಂದು ವರ್ಗದ ಜನರ ಬಗ್ಗೆ ಅವಮಾನಕಾರಿಯಾಗಿ ಮಾತನಾಡುತ್ತೇನೆಯೇ ? ನನಗೆ ಹುಚ್ಚೇ ? ಅದಕ್ಕೆ ಕಾರಣವಾದರೂ ಏನು ? ಅದರಿಂದ ನನಗೆ ಸಿಗುವ ಲಾಭವಾದರೂ ಏನು ? ಇಷ್ಟಕ್ಕೂ ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ ? ಯಾಕೆ ಇಷ್ಟೊಂದು ಧ್ವೇಷ ? ಎಂಬ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

Most Popular

To Top