ಒಂದೂವರೆ ಸಾವಿರ ಸಾಲದ ಬಡ್ಡಿ ಕಟ್ಟದ ದಲಿತ ಮಹಿಳೆಯನ್ನು ನಗ್ನಗೊಳಿಸಿ, ಮೂತ್ರ ಕುಡಿಸಿ ಹಲ್ಲೆ….!

Follow Us :

ಸಮಾಜದಲ್ಲಿ ನಾಗರೀಕತೆ ಬೆಳೆಯುತ್ತಿದ್ದರೂ ಸಹ ಆಗಾಗ ದಲಿತರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇರುತ್ತದೆ. ವಿವಿಧ ಕಾರಣಗಳಿಂದ ಅವರ ಮೇಲಿನ ಹಲ್ಲೆಯಂತಹ ಘಟನೆಗಳು ನಡೆಯುತ್ತಿದ್ದು, ಪಾಟ್ನಾದಲ್ಲಿ ಮನುಜ ಕುಲ ತಲೆತಗ್ಗಿಸುವಂತಹ ಕೃತ್ಯವೊಂದು ನಡೆದಿದೆ. ಒಂದೂವರೆ ಸಾವಿರ ಸಾಲದ ಬಡ್ಡಿಯನ್ನು ಪಾವತಿಸದ ಕಾರಣದಿಂದ ದಲಿತ ಮಹಿಳೆಯ ಮೇಲೆ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಮೂತ್ರ ಕುಡಿಸಿ ವಿಕೃತಿ ಮೆರೆದಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಬಿಹಾರದ ರಾಜಧಾನಿ ಪಾಟ್ನಾದ ಖುಸ್ರುಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೋಸಿಂಪುರ್‍ ಗ್ರಾಮದಲ್ಲಿ ಈ ಅವಮಾನವೀಯ ಘಟನೆ ನಡೆದಿದೆ. ಕಳೆದ ಶನಿವಾರ ತಡರಾತ್ರಿ ದಲಿತ ಮಹಿಳೆಯ ಮೇಲೆ ಹಲ್ಲೆ ನಡೆದಿದೆ. ಎರಡು ವರ್ಷಗಳ ಹಿಂದೆ ದಲಿತ ಮಹಿಳೆಯ ಗಂಡ 1500 ರೂಪಾಯಿ ಪಡೆದುಕೊಂಡಿದ್ದರಂತೆ. ಆ ಹಣವನ್ನು ಕೆಲವು ದಿನಗಳಲ್ಲೆ ವಾಪಸ್ ಮಾಡಿದ್ದರು. ಆದರೆ ಆ ಹಣಕ್ಕೆ ವಿಪರೀತ ಬಡ್ಡಿ ಹಾಕಿ ಬಡ್ಡಿ ನೀಡುವಂತೆ ಆಕೆಗೆ ಕಿರುಕುಳ ನೀಡಲಾಗುತ್ತಿತ್ತಂತೆ. ಆದರೆ ಮನೆಯ ಬಡತನದ ಕಾರಣದಿಂದ ಆಕೆಗೆ ಹಣ ಪಾವತಿಸಲು ಸಾಧ್ಯವಾಗಲಿಲ್ಲವಂತೆ. ದುಡ್ಡ ಕೊಟ್ಟಂತಹ ಆರೋಪಿಗಳು ಬಡ್ಡಿ ಮೇಲೆ ಬಡ್ಡಿ ಹಾಕಿ ಹಣ ದುಪ್ಪಟ್ಟು ನೀಡುವಂತೆ ಕಿರುಕುಳ ನೀಡಿದ್ದಾರಂತೆ. ಹಣ ನೀಡದ ಕಾರಣದಿಂದ ಆಕೆಯ ಮನೆಗೆ ಬಂದು ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ ಮೂತ್ರ ಕುಡಿಸಿ ವಿಕೃತಿ ಮೆರೆದಿದ್ದಾರೆ. ಸದ್ಯ ಗಾಯಾಳು ಮಹಿಳೆ ಖುಸ್ರುಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ಗ್ರಾಮದ ಪ್ರಮೋಸ್ ಕುಮಾರ್‍ ಸಿಂಗ್ ಹಾಗೂ ಆತನ ಪಿಯೂಷ್ ಕುಮಾರ್‍ ಸಮಯ್ ಸೇರಿದಂತೆ ಮೂರ್ನಾಲ್ಕು ಜನರ ವಿರುದ್ದ ಸಂತ್ರಸ್ತ ಮಹಿಳೆ ಖುಸ್ರುಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದಾರೆ. ಈ ಬಗ್ಗೆ ಸಂತ್ರಸ್ತೆ ಮಾತನಾಡಿ ಎರಡು ವರ್ಷಗಳ ಹಿಂದೆ ತನ್ನ ಪತಿ ಗ್ರಾಮದ ಪ್ರಮೋದ್ ಕುಮಾರ್‍ ಸಿಂಗ್ ಅವರಿಂದ ಒಂದೂವರೆ ಸಾವಿರ ಸಾಲ ಪಡೆದಿದ್ದರು. ಅದನ್ನು ಕಳೆದ ವರ್ಷವೇ ಮರುಪಾವತಿಸಿದ್ದರು. ಆದರೆ ಪ್ರಮೋದ್ ಸಿಂಗ್ ಎಂಬುವವರು ಬಡ್ಡಿ ಹಣ ನೀಡುವಂತೆ ನಿರಂತರವಾಗಿ ಬೇಡಿಕೆ ಇಡುತ್ತಿದ್ದರು. ಶನಿವಾರ ರಾತ್ರಿ ಪ್ರಮೋದ್ ಕುಮಾರ್‍ ಸಿಂಗ್ ಮತ್ತು ಆತನ ಬೆಂಬಲಿಗರು ಮನೆಗೆ ಬಂದು ಬಲವಂತವಾಗಿ ಮನೆಗೆ ಕರೆದೊಯ್ಡು ದೈಹಿಕವಾಗಿ ಹಲ್ಲೆ ನಡೆಸಿ, ಜೊತೆಗೆ ಕೆಲ ಪುಂಡರು ವಿವಸ್ತ್ರಗೊಳಿಸಿ ಥಳಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಇನ್ನೂ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬಿಸಿದ್ದಾರೆ. ಫತುಹಾ ಡಿ.ಎಸ್.ಪಿ ಸಿಯಾರಾಮ್ ಯಾದವ್ ಸಹ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.