News

ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳ ಅಳವಡಿಕೆಗೆ ಫೆ.28 ಡೆಡ್ ಲೈನ್, ಗಡುವು ನೀಡಿದ ಬಿಬಿಎಂಪಿ….!

ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳು, ಅಂಗಡಿ ಮುಗ್ಗಟ್ಟುಗಳು, ಉದ್ಯಮಗಳ ಮುಂದೆ ಶೇ.60 ರಷ್ಟು ಕನ್ನಡ ಬಳಕೆ ಮಾಡಿ ನಾಮಫಲಕ ಅಳವಡಿಕೆ ಮಾಡುವುದಕ್ಕೆ ಬೆಂಗಳೂರು ಮಹಾನಗರ ಪಾಲಿಕೆ ಫೆ.28ರವರೆಗೆ ಗಡುವು ನೀಡಿದ್ದು, ಇದು ಡೆಡ್ ಲೈನ್ ಎಂದು ಹೇಳಲಾಗುತ್ತಿದೆ.

ರಾಜ್ಯ ಸರ್ಕಾರ ವಾಣಿಜ್ಯೋದ್ಯಮ ಸೇರಿದಂತೆ ಎಲ್ಲಾ ಕಡೆ ಶೇ.60 ರಷ್ಟು ನಾಮಫಲಕಗಳನ್ನು ಅಳವಡಿಕೆ ಮಾಡುವಂತೆ ನಿರ್ಣಯ ತೆಗೆದುಕೊಂಡಿದೆ. ಅದರಂತೆ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಅಂಗಡಿ, ವಾಣಿಜ್ಯೋದ್ಯಮ, ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡಬೇಕು ಎಂಬ ಆದೇಶ ಸಹ ಸುಮಾರು ವರ್ಷಗಳಿಂದ ಜಾರಿಯಲ್ಲಿದೆ. ಆದರೆ ಆ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಪಾಲಿಕೆ ಅಧಿಕಾರಿಗಳು ವಿಫಲರಾಗಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ನಾಮಫಲಕ ಅಳವಡಿಕೆಗಾಗಿ ದೊಡ್ಡ ಮಟ್ಟದ ಹೊರಾಟ ಸಹ ಮಾಡಿದ್ದರು. ಈ ಪ್ರತಿಭಟನೆಯಲ್ಲಿ ಕರವೇ ಅಧ್ಯಕ್ಷ ನಾರಾಯಣಗೌಡ ಬಂಧನವಾಗಿದ್ದು, ಸದ್ಯ ಜಾಮೀನು ಮೇಲೆ ಹೊರಗಿದ್ದಾರೆ.

ಬಳಿಕ ವಾಣಿಜ್ಯೋದ್ಯಮ ಸೇರಿದಂತೆ ಖಾಸಗಿ ಕಚೇರಿಗಳು, ಮಾಲ್ ಗಳ ಮೇಲೆ ಕನ್ನಡ ನಾಮಫಲಕಗಳಿಗೆ ಅಗ್ರಸ್ಥಾನ ನೀಡದೇ ಇದ್ದರೇ ಮತ್ತೆ ಹೋರಾಟ ಮಾಡುವುದಾಗಿ ಕರವೇ ಅಧ್ಯಕ್ಷ ನಾರಾಯಣಗೌಡ ರವರು ಎಚ್ಚರಿಕೆ ನೀಡಿದ್ದರು. ಇದೀಗ ಎಚ್ಚೆತ್ತುಕೊಂಡ ಸರ್ಕಾರ ಹಾಗೂ ಬಿಬಿಎಂಪಿ ವತಿಯಿಂದ ಕಠಿಣ ಕ್ರಮ ತೆಗೆದುಕೊಳ್ಳಾಗುತ್ತಿದೆ. ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ ಗಿರಿನಾಥ್ ರವರು ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಅಂಗಡಿ ಮುಗ್ಗಟ್ಟುಗಳು, ವಾಣಿಜ್ಯೋದ್ಯಮ ಮೇಲೆ ಹಾಕಿರುವಂತಹ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸಬೇಕು ಎಂದು ಸೂಚನೆ ನೀಡಿದ್ದಾರೆ ಜೊತೆಗೆ ಫೆ.28 ಕೊನೆಯ ದಿನಾಂಕ ಎಂದೂ ಸಹ ಗಡುವು ನೀಡಿದ್ದಾರೆ. ಕೂಡಲೇ ಈ ಕೆಲಸ ಮಾಡದೇ ಇದ್ದರೇ, ನಿಯಮದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಸಹ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

Most Popular

To Top