News

ಜ.22 ರಂದು ತಮ್ಮ ಮನೆಯಲ್ಲಿ ಪ್ರತಿಯೊಬ್ಬರು ರಾಮಜ್ಯೋತಿ ಬೆಳಗಿ ಎಂದು ಪ್ರಧಾನಿ ಮೋದಿ ಕರೆ……!

ದೇಶದ ಕೋಟ್ಯಂತರ ಹಿಂದೂಗಳ ಸುಮಾರು ವರ್ಷಗಳ ಕನಸಾದ ಅಯೋಧ್ಯೆ ರಾಮಮಂದಿರ ಪ್ರತಿಷ್ಟಾಪನೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಈ ಬಗ್ಗೆ ದೊಡ್ಡ ಮಟ್ಟದಲ್ಲೇ ಸುದ್ದಿ ಸಹ ನಡೆಯುತ್ತಿದೆ. ಆರೋಪ ಪ್ರತ್ಯಾರೋಪಗಳೂ ಸಹ ನಡೆಯುತ್ತಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಜ.22 ರಂದು ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ರಾಮ ಜ್ಯೋತಿಯನ್ನು ಬೆಳಗಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಎರಡು ಸಾವಿರ ಕೋಟಿ ಮೊತ್ತ 8 ಅಮೃತ ಯೋಜನೆಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು,  ನಮ್ಮ ಸರ್ಕಾರವು ಭಗವಾನ್ ರಾಮನ ಆದರ್ಶಗಳಿಂದ ಪ್ರೇರಣೆ ಪಡೆದಿದೆ. ಆದ್ದರಿಂದ ಜ.22 ರಂದು ರಾಮಜ್ಯೋತಿಯನ್ನು ಬೆಳಗಬೇಕು. ಅದು ಅವರ ಬದುಕಿನಲ್ಲಿನ ಬಡತನ ನಿರ್ಮೂಲನೆಗೆ ಪ್ರೇರಣೆಯಾಗಬೇಕು. ಮೂರನೇ ಬಾರಿ ಜನಾಶಿರ್ವಾದದೊಂದಿಗೆ ಮೋದಿ ಗ್ಯಾರಂಟಿಗಳನ್ನು ಅನುಷ್ಟಾನಗೊಳಿಸಲಾಗುತ್ತದೆ. ಅದರಿಂದ ಜಗತ್ತಿನ ಅಗ್ರ ಮೂರು ಆರ್ಥಿಕ ಶಕ್ತಿಗಳಲ್ಲಿ ಭಾರತಕ್ಕೆ ಸ್ಥಾನ ಕಲ್ಪಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.

ರಾಮ ನಮಗೆ ಬದ್ದತೆಗಳನ್ನು ಗೌರವಿಸಲು ಕಲಿಸಿದ್ದಾರೆ. ಮೋದಿಯ ಗ್ಯಾರಂಟಿ ಅಂದರೇ ಸಂಪೂರ್ಣ ಗ್ಯಾರಂಟಿ ಜಾರಿ ಎಂದರ್ಥ. ಬಡವರ ಕಲ್ಯಾಣದ ದೃಷ್ಟಿಯಿಂದ ನಾವು ಹಾಕಿಕೊಂಡಿರುವ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿಯನ್ನು ನಾವು ಹಾಕಿಕೊಂಡಿದ್ದೇವೆ. ತನ್ನ ಜನರ ಸಂತೋಷಕ್ಕಾಗಿ ಭಗವಾನ್ ರಾಮ ಕೆಲಸ ಮಾಡಿದ್ದಾರೆ. ನಮ್ಮ ಸರ್ಕಾರವೂ ಸಹ ಬಡಜನರ ಸಬಲೀಕರಣಕ್ಕೆ ಕೆಲಸ ಮಾಡುತ್ತಿದೆ. ಬಡ ಜನರ ಕಠಿಣ ಪರಿಸ್ಥಿತಿಯನ್ನು ದೂರಗೊಳಿಸಲು ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಇದರ ಭಾಗವಾಗಿಯೇ ಶೌಚಾಲಯ ಹಾಗೂ ಮನೆಗಳನ್ನು ನಿರ್ಮಾಣ ಮಾಡಿದ್ದೇವೆ. ಮೋದಿಯ ಮರ್ಯಾದೆಯ ಗ್ಯಾರಂಟಿಯಾಗಿ ದೇಶದಲ್ಲಿ ಹತ್ತು ಕೋಟಿ ಶೌಚಾಲಯ ಹಾಗೂ ನಾಲ್ಕು ಕೋಟಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸರ್ಕಾರ 30 ಲಕ್ಷ ಕೋಟಿ ಮೊತ್ತವನ್ನು ವಿವಿಧ ಯೋಜನೆಗಳ ಮೂಲಕ ಫಲಾನುಭವಿಗಳಿಗೆ ನಗದನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ. ಈ ಕಾರಣದಿಂದ 25 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ. ಈ ಹಿಂದೆ ಅರ್ಧ ರೊಟ್ಟಿ ತಿನ್ನೋಣ ಎಂಬುದಿತ್ತು. ಇದೀಗ ಮೋದಿ ಸರ್ಕಾರದಲ್ಲಿ ಪ್ರತಿಯೊಬ್ಬರು ಪೂರ್ಣ ರೊಟ್ಟಿಯನ್ನು ತಿನ್ನುವಂತಾಗಲಿದೆ ಎಂದರು. ಜ.22 ರಂದು ರಾಮಮಂದಿರದಲ್ಲಿ ಭಗವಾನ್ ರಾಮ ವಿರಾಜಮಾನನಾಗಿ ನೆಲೆ ನಿಲ್ಲಲಿದ್ದಾನೆ. ಸುಮಾರು ವರ್ಷಗಳ ಹಿಂದೆ ಪುಟ್ಟ ಕುಟೀರದಲ್ಲಿ ರಾಮನ ಪೂಜೆ ನಡೆಯುತ್ತಿತ್ತು ಎಂಬ ನೋವು  ಇನ್ನು ಮುಂದೆ ಇರೊಲ್ಲ ಎಂದರು.

Most Popular

To Top