ಪ್ರೀತಿಸಿದವಳನ್ನೇ ಕೊಲೆ ಮಾಡಿ, ಅದರ ವಿಡಿಯೋ ವಾಟ್ಸಾಪ್ ಸ್ಟೇಟಸ್ ಗೆ ಹಾಕಿಕೊಂಡ ಭೂಪ……!

Follow Us :

ಸಮಾಜದಲ್ಲಿ ಕೆಲವೊಂದು ಕ್ಷುಲ್ಲಕ ಕಾರಣಗಳಿಂದ ಕೊಲೆಗಳಂತಹ ಪ್ರಕರಣಗಳು ನಡೆಯುತ್ತಿರುತ್ತವೆ. ಕೆಲವರು ಕೊಲೆ ಮಾಡಿ ಪರಾರಿಯಾಗುತ್ತಾರೆ ಮತ್ತೆ ಕೆಲವರು ಪೊಲೀಸರಿಗೆ ಶರಣಾಗುತ್ತಿರುತ್ತಾರೆ ಅಂತಹ ಪ್ರಕರಣಗಳ ಬಗ್ಗೆ ಕೇಳಿರುತ್ತೇವೆ. ಆದರೆ ಇಲ್ಲೊಬ್ಬ ಭೂಪ ತನ್ನ ಪ್ರೇಯಸಿಯನ್ನು ಕೊಂದು ಈ ವಿಡಿಯೋ ಅನ್ನು ಆತ ತನ್ನ ವಾಟ್ಸಾಪ್ ಸ್ಟೇಟಸ್ ನಲ್ಲಿ ಹಾಕಿಕೊಂಡು ಬಳಿಕ ಪೊಲೀಸರ ಅತಿಥಿಯಾಗಿರುವ ಘಟನೆಯೊಂದು ನಡೆದಿದೆ.

ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಪ್ರಿಯಕರನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆಯೊಂದು ಚೆನೈನಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಕೊಲ್ಲಂ ಮೂಲದ ಫೌಸಿಯಾ (20) ಎಂದು ಗುರ್ತಿಸಲಾಗಿದೆ. ಆಕೆಯನ್ನು ಕೊಲೆ ಮಾಡಿದ್ದು, ಆಕೆಯ ಪ್ರಿಯಕರ ಆಶಿಕ್ (20) ಎಂದು ಗುರ್ತಿಸಲಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆರೋಪಿ ಆಶಿಕ್ ಸಹ ಕೊಲ್ಲಂ ಮೂಲದವನೇ ಆಗಿದ್ದಾನೆ. ಫೌಸಿಯಾ ಚೆನೈನ ಕ್ರೋಂ ಪೇಟ್ ನಲ್ಲಿರುವ ಬಾಲಾಜಿ ವೈದ್ಯಕೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ನರ್ಸಿಂಗ್ ನಲ್ಲಿ ಓದುತ್ತಿದ್ದರು ಎಂದು ತಿಳಿದುಬಂದಿದೆ.

ಆರೋಪಿ ಆಶಿಕ್ ಹಾಗೂ ಫೌಸಿಯಾ ಕಳೆದ ಶುಕ್ರವಾರ ಕ್ರೋಂ ಪೇಟೆಯಲ್ಲಿರುವ ಹೋಟೆಲ್ ಒಂದರಲ್ಲಿ ರೂಂ ಬುಕ್ ಮಾಡಿದ್ದರು. ಇಬ್ಬರ ನಡುವೆ ಜಗಳವಾಗಿದ್ದು, ಆ ಕಾರಣದಿಂದ ಆಶಿಕ್ ತನ್ನ ಟೀ ಶರ್ಟ್ ಬಳಸಿ ಫೌಸಿಯಾಳ ಕತ್ತು ಹಿಸುಕಿ ಕೊಂದಿದ್ದಾನೆ. ಅದು ಸಾಲದು ಎಂಬಂತೆ ತನ್ನ  ಪೋನ್ ಬಳಸಿ ಈ ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿಕೊಂಡು, ವಿಡಿಯೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ ಆಗಿ ಅಪ್ಲೋಡ್ ಮಾಡಿದ್ದಾನೆ. ಅದನ್ನು ನೋಡಿದ ಫೌಸಿಯಾ ಸ್ನೇಹಿತರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಆಶಿಕ್ ನನ್ನು ಬಂಧಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

ಇನ್ನೂ ಆಶಿಕ್ ಹಾಗೂ ಫೌಸಿಯಾ ಇಬ್ಬರೂ ಅಪ್ರಾಪ್ತರಾಗಿದ್ದಾಗ ವಿವಾಹವಾಗಿದ್ದರಂತೆ. ಇಬ್ಬರಿಗೂ ಒಂದು ಮಗು ಸಹ ಇದ್ದು, ಮೈಸೂರಿನ ಆಶ್ರಮದಲ್ಲಿ ಇರಿಸಲಾಗಿದೆಯಂತೆ. ಫೌಸಿಯಾ ಅಪ್ರಾಪ್ತಳಾಗಿದ್ದಾಗ ಮದುವೆಯಾದ ಕಾರಣದಿಂದ ಆಶಿಕ್ ವಿರುದ್ದ ಪೋಕ್ಸೋ ಕಾಯ್ದೆಯಡಿ ಈ ಹಿಂದೆ ಜೈಲಿಗೆ ಸಹ ಸೇರಿದ್ದರಂತೆ. ಜೈಲಿನಿಂದ ಹೊರಬಂದ ಬಳಿಕ ಆಶಿಕ್ ಫೌಸಿಯಾ ಜೊತೆ ಇರಲು ಚೆನೈನಲ್ಲೇ ಇದ್ದನಂತೆ. ಇನ್ನೂ ಆಶಿಕ್ ಗೆ ಬೇರೆ ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಕಾರಣದಿಂದ ಫೌಸಿಯಾ ಹಾಗೂ ಆಶಿಕ್ ನಡುವೆ ಜಗಳ ನಡೆದಿದ್ದು, ಈ ಕಾರಣದಿಂದ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.