Uncategorized

ಲೋಕಸಭಾ ಚುನಾವಣೆ 2024 ಅಧಿಸೂಚನೆ ಪ್ರಕಟ, ಏ.19 ರಿಂದ 7 ಹಂತಗಳಲ್ಲಿ ಮತದಾನ, ಜೂ.4 ಫಲಿತಾಂಶ ಪ್ರಕಟ….!

ದೇಶದಾದ್ಯಂತ ಲೋಕಸಭಾ ಚುನಾವಣೆಯ ಕಾವು ಜೋರಾಗಿದ್ದು, ಇದೀಗ ಕೇಂದ್ರ ಚುನಾವಣಾ ಆಯೋಗ 18 ಲೋಕಸಭಾ ಚುನಾವಣೆಗೆ ಅಧಿಸೂಚನೆ ಪ್ರಕಟಿಸಿದೆ.  ಏ.19 ರಿಂದ ಜೂ.1 ರವರೆಗೂ ಚುನಾವಣೆ ನಡೆಯಲಿದೆ. 7 ಹಂತಗಳಲ್ಲಿ ಈ ಭಾರಿ ಚುನಾವಣೆ ನಡೆಯಲಿದ್ದು, ಜೂ.4 ರಂದು ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

ಕೇಂದ್ರ ಚುನಾವಣಾ ಆಯುಕ್ತರಾದ ರಾಜೀವ್ ಕುಮಾರ್‍, ಜ್ಞಾನೇಶ್ ಕುಮಾರ್‍ ಹಾಗೂ ಸುಖ್ಬೀರ್‍ ಸಿಂಗ್ ಸಂಧು ರವರು ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಚುನಾವಣಾ ದಿನಾಂಕ ಘೋಷಣೆ ಮಾಡಿದ್ದಾರೆ. ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಸಹ ಜಾರಿಯಾಗಿದೆ. ಇದರ ಜೊತೆಗೆ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ ರಾಜ್ಯಗಳಲ್ಲಿ ವಿಧಾನಸಭೆ ಹಾಗೂ ಲೋಕಸಭೆ ಎರಡೂ ಚುನಾವಣೆ ಘೋಷಣೆಯಾಗಿದೆ. ಇನ್ನೂ ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಏ.26 ಮೊದಲ ಹಂತ ಹಾಗೂ ಮೇ.7 ರಂದು ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಈ ಬಾರಿ ಚುನಾವಣೆ ಕಾ ಪರ್ವ್, ದೇಶ್ ಕಾ ಗರ್ವ್ ಎಂಬ ಧ್ಯೇಯವಾಕ್ಯದಲ್ಲಿ ಚುನಾವಣೆ ನಡೆಯಲಿದೆ. ನಮ್ಮ ತಂಡವು ಈಗ ಪೂರ್ಣಗೊಂಡಿದ್ದು, ಭಾರತೀಯ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬಕ್ಕೆ ನಾವು ಸಂಪೂರ್ಣವಾಗಿ ಸಿದ್ದರಾಗಿದ್ದೇವೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‍ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಬಾರಿ ಒಟ್ಟು 97 ಕೋಟಿ ಮತದಾರರು ಮತದಾನ ಹಕ್ಕು ಪಡೆದುಕೊಂಡಿದ್ದಾರೆ. 49.7 ಕೋಟಿ ಪುರುಷ, 47.1 ಕೋಟಿ ಮಹಿಳಾ ಮತದಾರರಿದ್ದಾರೆ. 48 ಸಾವಿರ ತೃತೀಯ ಲಿಂಗಿ ಮತದಾರರಿದ್ದಾರೆ. 1.8 ಕೋಟಿ ಮಂದಿ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. 10.5 ಲಕ್ಷ ಮತಗಗಟ್ಟೆಗಳನ್ನು ಸಿದ್ದಪಡಿಸಲಾಗಿದೆ, 1.5 ಕೋಟಿ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. 55 ಲಕ್ಷ ಇವಿಎಂ, 4 ಲಕ್ಷ ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಪತ್ರಿಕಾ ಗೋಷ್ಟಿಯಲ್ಲಿ ಮಾಹಿತಿ ನೀಡಿದರು.

  • ಮೊದಲ ಹಂತದ ಮತದಾನ: ಏಪ್ರೀಲ್ 19 ರಂದು 102 ಕ್ಷೇತ್ರಗಳಿಗೆ
  • ಎರಡನೇ ಹಂತದ ಮತದಾನ: ಏಪ್ರೀಲ್ 26 ರಂದು 89 ಕ್ಷೇತ್ರಗಳಿಗೆ
  • ಮೂರನೇ ಹಂತದ ಮತದಾನ ಮೇ 7 ರಂದು 94 ಕ್ಷೇತ್ರಗಳಿಗೆ
  • ನಾಲ್ಕನೇ ಹಂತದ ಮತದಾನ ಮೇ 13 ರಂದು 96 ಕ್ಷೇತ್ರಗಳಿಗೆ
  • ಐದನೇ ಹಂತದ ಮತದಾನ ಮೇ 20 ರಂದು 49 ಕ್ಷೇತ್ರಗಳಿಗೆ
  • ಆರನೇ ಹಂತದ ಮತದಾನ ಮೇ 25 ರಂದು 57 ಕ್ಷೇತ್ರಗಳಿಗೆ
  • ಏಳನೇ ಹಂತದ ಮತದಾನ ಜೂನ್ 01 ರಂದು 8 ಕ್ಷೇತ್ರಗಳಿಗೆ
  • ಜೂನ್ 4 ರಂದು ಫಲಿತಾಂಶ ಪ್ರಕಟ

Most Popular

To Top