News

ಬಿಜೆಪಿ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ಕೆ ಗೆ ಟಾಂಗ್ ಕೊಟ್ಟ ಸಿದ್ದು, ನನ್ನ ಹೆಣ ಕೂಡ ಬಿಜೆಪಿ ಹೋಗೊಲ್ಲ ಎಂದ ಸಿಎಂ…….!

ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲ, ಆಪರೇಷನ್ ಹಸ್ತ ಮೊದಲಾದವುಗಳ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿದೆ. ರಾಜಕೀಯ ಮುಖಂಡರುಗಳ ನಡುವೆ ಆರೋಪ ಪ್ರತ್ಯಾರೋಪಗಳು ಸಹ ನಡೆಯುತ್ತಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಮಾಜಿ ಸಿಎಂ ಕುಮಾರಸ್ವಾಮಿ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ಸೇರಲು ಪ್ರಯತ್ನ ನಡೆಸಿದ್ದರು ಎಂದು ಹೇಳಿದ್ದು, ಅದಕ್ಕೆ ಸಿಎಂ ಸಿದ್ದರಾಮಯ್ಯ ಇದೀಗ ಖಡಕ್ ಉತ್ತರ ಕೊಟ್ಟಿದ್ದಾರೆ.

ಕರ್ನಾಟಕ ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ ಕುಮಾರಸ್ವಾಮಿ ಹೇಳಿಕೆಗೆ ಖಡಕ್ ಕೌಂಟರ್‍ ಕೊಟ್ಟಿದ್ದಾರೆ. ನನ್ನ ಹೆಣ ಸಹ ಬಿಜೆಪಿಗೆ ಹೋಗುವುದಿಲ್ಲ. ಕೋಮುವಾದಿಗಳ ವಿರುದ್ದ ನನ್ನ ಹೋರಾಟ ನಿರಂತರವಾಗಿರುತ್ತದೆ. ಕೋಮುವಾದಿ ಪಕ್ಷದ ಜೊತೆಗೆ ನಾನು ಎಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ನಾನು ಬಿಜೆಪಿಗೆ ಹೋಗುತ್ತೇನೆ ಎಂದರೇ ಅದನ್ನು ಯಾರಾದರೂ ನಂಬುತ್ತಾರೆಯೇ? ಯಾರನ್ನೋ ಯಾವುದೋ ಸಮಯದಲ್ಲಿ ಭೇಟಿಯಾಗಿರುತ್ತೇವೆ. ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರನ್ನು ಸಹ ಭೇಟಿಯಾಗಿದ್ದೆ. ಈ ಹಿಂದೆ ಎಲ್.ಕೆ.ಅಡ್ವಾಣಿಯವರನ್ನು ಸಹ ಭೇಟಿಯಾಗಿದ್ದೆ. ಭೇಟಿಯಾದ ಮಾತ್ರಕ್ಕೆ  ಬಿಜೆಪಿ ಸೇರ್ತಾರೆ ಎಂದು ಕಟ್ಟು ಕಥೆ ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.

ಇನ್ನೂ ಇದೇ ವೇಳೆ ಒಂದು ರಾಷ್ಟ್ರ ಒಂದು ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಹ ಮಾತನಾಡಿದರು. ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಅಸಾಧ್ಯವಾದ ಮಾತು. ಇದು ಅವೈಜ್ಞಾನಿಕ ಯೋಚನೆಯಾಗಿದೆ. ಕೆಲವೊಂದು ರಾಜ್ಯಗಳಲ್ಲಿ  ಅರ್ಧ ಅವಧಿಯ ಸರ್ಕಾರ ಇರುತ್ತದೆ. ಮತ್ತೆ ಕೆಲವು ರಾಜ್ಯಗಳಲ್ಲಿ ರಾಜ್ಯಪಾಲರ ಆಡಳಿತ ಇರುತ್ತದೆ. ಅಂತಹ ಸಂದರ್ಭದಲ್ಲಿ ಒಂದು ರಾಷ್ಟ್ರ ಒಂದು ಚುನಾವನೆ ನಡೆಸೋಕೆ ಹೇಗೆ ಸಾಧ್ಯ. ಇನ್ನೂ ಕರ್ನಾಟಕದ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಬಿಜೆಪಿ ಧೃತಿಗೆಟ್ಟಿದ್ದಾರೆ. ಇನ್ನೂ ಪ್ರಧಾನಿ ಮೋದಿಯವರು ಪ್ರಚಾರ ಮಾಡಿದ ಬಹುತೇಕ ಕಡೆ ಕಾಂಗ್ರೆಸ್ ಗೆದ್ದಿದೆ. ಈ ಕಾರಣದಿಂದ ಒತ್ತಡದಲ್ಲಿ ಅವರು ಒಂದು ರಾಷ್ಟ್ರ ಒಂದು ಚುನಾವಣೆ ಎಂದು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಇನ್ನೂ ರಾಜ್ಯದಲ್ಲಿ ಬರ ಘೋಷಣೆಗೆ ಸಂಬಂಧಿಸಿದಂತೆ ಸಿದ್ದತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 136 ತಾಲೂಕುಗಳಲ್ಲಿ ಬರ ಅಧ್ಯಯನ ನಡೆಯುತ್ತಿದೆ. ಈ ಅಧ್ಯಯನದ ವರದಿಯ ಮೇರೆಗೆ ಬರ ಘೋಷಣೆ ಮಾಡುತ್ತೇವೆ. ಖಾಸಗಿ ಸಾರಿಗೆಯವರು ವಾಸ್ತವಕ್ಕೆ ದೂರವಾದ ಬೇಡಿಕೆಗಳನ್ನು ಮುಂದಿಟ್ಟು ಬಂದ್ ಮಾಡುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗಮನ ಹರಿಸುತ್ತಾರೆ ಎಂದು ತಿಳಿಸಿದ್ದಾರೆ.

Most Popular

To Top