News

ಇಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಆಸ್ಪತ್ರೆಗೆ ದಾಖಲು, ಮಿದುಳಿಗೆ ಶಸ್ತ್ರಚಿಕಿತ್ಸೆ….!

ಇಶಾ ಫೌಂಡೇಷನ್ ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ರವರು ದೆಹಲಿಯ ಅಪೊಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿತ್ತಂತೆ. ಈ ಕಾರಣದಿಂದ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಸದ್ಯ ಅವರು ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾರೆ  ಎಂದು ಇಶಾ ಫೌಂಡೇಷನ್ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡಿದೆ.

ಇಶಾ ಫೌಂಡೇಷನ್ ಸಂಸ್ಥಾಪಕ ಸದ್ಗುರು ಸದ್ಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಕುರಿತು ಸದ್ಗುರು ರವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಸದ್ಗುರು ಮಾತನಾಡುತ್ತಾ, ಅಪೋಲೋ ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಕರು ನನ್ನ ತಲೆಬರುಡೆಯನ್ನು ಕತ್ತರಿಸಿ ಏನನ್ನೋ ಹುಡುಕಲು ಪ್ರಯತ್ನಿಸಿದರು. ಆದರೆ ಅವರಿಗೆ ಏನೂ ಕಾಣಲಿಲ್ಲ. ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ತಮಾಷೆ ಮಾಡಿದ್ದಾರೆ. ನಾನು ದೆಹಲಿಯಲ್ಲಿದ್ದೇನೆ. ತಲೆಬರುಡೆಗೆ ಬ್ಯಾಂಡೇಜ್ ಮಾಡಲಾಗಿದೆ ಆದರೆ ಯಾವುದೇ ಹಾನಿಯಿಲ್ಲ ಎಂದು ಸದ್ಗುರು ಹೇಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅವರ ಅನುಯಾಯಿಗಳು ಹಾಗೂ ಗಣ್ಯರು ಸದ್ಗುರು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಇನ್ನೂ ಈ ಕುರಿತು ದೆಹಲಿಯ ಅಪೋಲೋ ಆಸ್ಪತ್ರೆಯ ಡಾ.ವಿನಿತ್ ಸೂರಿ ರವರು ಜಗ್ಗಿ ವಾಸುದೇವ್ ರವರ ಆರೋಗ್ಯದ ಬಗ್ಗೆ ಮಾತನಾಡಿದ್ದಾರೆ. ಸದ್ಗುರು ರವರು ನಾಲ್ಕು ವಾರಗಳಿಂದ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ನೋವಿನ ತೀವ್ರತೆಯ ನಡುವೆಯೂ ಅವರು ತಮ್ಮ ವೇಳಾಪಟ್ಟಿ ಹಾಗೂ ಕಾರ್ಯಕ್ರಮಗಳನ್ನು ಮುಂದುವರೆಸಿದ್ದಾರೆ. ಕಳೆದ ಮಹಾಶಿವರಾತ್ರಿ ಹಬ್ಬದ ಆಚರಣೆಗಳಲ್ಲಿ ಸಹ ಅವರು ಪಾಲ್ಗೊಂಡಿದ್ದರು. ಮಾ.14 ರಂದು ದೆಹಲಿಗೆ ಬಂದಾಗ ಅವರಿಗೆ ತೀವ್ರ ತಲೆನೋವು ಕಾಣಿಸಿಕೊಂಡಿದೆ. ಮಾರ್ಚ್ 17 ರಂದು, ಸದ್ಗುರುಗಳು ತಮ್ಮ ಎಡಗಾಲಿನ ದೌರ್ಬಲ್ಯ ಮತ್ತು ನಿರಂತರ ವಾಂತಿಯೊಂದಿಗೆ ಉಲ್ಬಣಗೊಳ್ಳುವ ತಲೆನೋವಿನ ಬಗ್ಗೆ ದೂರು ನೀಡಿದ್ದರಿಂದ ಅವರ ಸ್ಥಿತಿಯು ಹದಗೆಟ್ಟಿತು.  ಬಳಿಕ ಅವರಿಗೆ ತುರ್ತು ಎಂ.ಆ.ಐ ಮಾಡಲಾಗಿದೆ. ಮೆದುಳಿನಲ್ಲಿ ಭಾರಿ ರಕ್ತಸ್ರಾವ ಆಗುತ್ತಿರುವುದು ಕಂಡುಬಂದಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇನ್ನೂ ಸದ್ಗುರು ರವರು ಶೀಘ್ರ ಗುಣಮುಖರಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಹಾರೈಸಿದ್ದಾರೆ. ಸದ್ಗುರು ಜೊತೆ ಮಾತನಾಡಿದ್ದೇನೆ. ಅವರಿಗೆ ಉತ್ತಮ ಆರೋಗ್ಯ ಸಿಗಲಿ ಹಾಗೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ ಸದ್ಗುರು ರವರು ಪ್ರತಿಕ್ರಿಯೆ ನೀಡಿದ್ದಾರೆ. ಪ್ರಧಾನಿ ಮಂತ್ರಿಜೀ, ನನ್ನ ಬಗ್ಗೆ  ನೀವು ಕಾಳಜಿ ವಹಿಸಬೇಡಿ, ನಿಮಗೆ ಮುನ್ನೆಡೆಸುವುದಕ್ಕೆ ಒಂದು ರಾಷ್ಟ್ರವಿದೆ. ನಾಣು ಚೇತರಿಸಿಕೊಳ್ಳುತ್ತಿದ್ದು, ನಿಮ್ಮ ಕಾಳಜಿ ಮನತುಂಬಿ ಬಂದಿದೆ, ನಿಮಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

Most Popular

To Top