News

ಇಳಿವಯಸ್ಸಿನಲ್ಲಿ ಪ್ರೇಮ ಪಯಣ, ಮದುವೆಯಾಗುವುದಾಗಿ 63 ವರ್ಷದ ಅಜ್ಜಿಗೆ ಮೋಸ ಮಾಡಿದ 70ರ ಅಜ್ಜ….!

ಪ್ರೀತಿಗೆ ಕಣ್ಣಿಲ್ಲ, ಅದು ಯಾರ ಮೇಲೆ ಯಾವಾಗ ಬೇಕಾದರೂ ಹುಟ್ಟಬಹುದು ಎಂದು ಹೇಳಲಾಗುತ್ತದೆ. ಅದಕ್ಕೆ ಅನೇಕ ಉದಾಹರಣೆಗಳು ಸಹ ಇದೆ. ಬೇರೆ ದೇಶಗಳಿಂದಲೂ ಸಹ ಪ್ರೀತಿಸಿದ ವ್ಯಕ್ತಿಯನ್ನು ಮದುವೆಯಾಗಿರುವ ಘಟನೆಗಳನ್ನು ಸಹ ಕೇಳುತ್ತಲೇ ಇದ್ದೇವೆ. ಅದೇ ರೀತಿ ವ್ಯಾಮೋಹ, ಮೋಸದಿಂದ ಕೆಲವೊಂದು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆಗಳೂ ಸಹ ಇದೆ. ಅಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಪ್ರೀತಿ ಮಾಡಲು ವಯಸ್ಸಿಗೆ ಸಂಬಂಧವಿಲ್ಲ ಎಂಬಂತೆ ಅನೇಕರು ಪ್ರೇಮ ಪಾಶದಲ್ಲಿ ಸಿಲುಕುತ್ತಾರೆ. ಇದೀಗ ಬೆಂಗಳೂರಿನಲ್ಲಿ ವೃದ್ದರ ನಡುವೆ ಪ್ರೇಮ ಚಿಗುರಿದೆ. 70 ರ ಅಜ್ಜ 63ರ ಅಜ್ಜಿ ನಡುವೆ ಪ್ರೇಮಾಂಕುರವಾಗಿದೆಯಂತೆ. ಸುಮಾರು ತಿಂಗಳುಗಳಿಂದ ಇಬ್ಬರೂ ಪ್ರೇಮ ಪಕ್ಷಿಗಳಂತೆ ಪಾರ್ಕ್‌ಗಳು, ಸಿನೆಮಾಗಳು ಎಂದು ಸುತ್ತಾಟ ಸಹ ನಡೆಸಿದ್ದಾರಂತೆ. ಆದರೆ ಇದೀಗ ಆ ಅಜ್ಜ ಅಜ್ಜಿಯನ್ನು ಮೋಸ ಮಾಡಿದ್ದಾನಂತೆ. ಹಾಗಂತ ಅಜ್ಜಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನ್ಯಾಯದ ಮೊರೆ ಹೋಗಿದ್ದಾರಂತೆ.

ಬೆಂಗಳೂರಿನ ದಯಾಮಣಿ (63) ಎಂಬಾಕೆ ಲೋಕನಾಥನ್ (70) ವರ್ಷದ ವೃದ್ದನನ್ನು ಪ್ರೀತಿಸಿದ್ದಾಳೆ. ಇಬ್ಬರೂ ಗಾಡವಾದ ಪ್ರೀತಿಯಲ್ಲಿ ಮುಳುಗಿ ತೇಲಿದ್ದಾರಂತೆ. ಸುಮಾರು ತಿಂಗಳುಗಳ ಕಾಲ ಇಬ್ಬರೂ ಪ್ರಣಯ ಪಕ್ಷಿಗಳ ಮಾದರಿಯಲ್ಲಿ ತಿರುಗಾಡಿದ್ದಾರೆ. ಇದೀಗ ದಯಾಮಣಿ ತನ್ನ ಪ್ರಿಯಕರ ಮೋಸ ಮಾಡಿದ್ದಾಗಿ ಆರೋಪ ಮಾಡಿದ್ದಾಳೆ. ಸುಮಾರು ದಿನಗಳಿಂದ ಲೋಕನಾಥನ್ ತನ್ನೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದಾನೆ. ಆತ ಕರೆದಾಗ ಹೋಗಿಲ್ಲ ಅಂತಾ ಕೆಟ್ಟ ಪದಗಳನ್ನು ಬಳಸಿ ಕೊಲೆ ಮಾಡುವುದಾಗಿ ಬೆದರಿಕೆಯನ್ನು ಸಹ ಹಾಕಿದ್ದಾನೆ ಎಂದು ಲೋಕನಾಥನ್ ವಿರುದ್ದ ದಯಾಮಣಿ ಗಂಭೀರ ಆರೋಪಗಳನ್ನು ಸಹ ಮಾಡಿದ್ದಾರೆ.

ಇನ್ನೂ ಈ ಸಂಬಂಧ ದಯಾಮಣಿ ವಂಚನೆ ಮಾಡಿರುವ ಲೋಕನಾಥ್ ವಿರುದ್ದ ಈಸ್ಟ್ ಝೋನ್ ವುಮೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

Most Popular

To Top