ಖಾಸಗಿ ಬಸ್ ಪಲ್ಟಿ, ನಾಲ್ವರು ಸಾವು, ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಬಳಿ ನಡೆದ ಅಪಘಾತ….!

Follow Us :

ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ಬೈರೇಗೊಲ್ಲಹಳ್ಳಿಯಲ್ಲಿ ಖಾಸಗಿ ಬಸ್ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, ಉಳಿದವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಗಾಯಗೊಂಡವರನ್ನು ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಬಾಗೇಪಲ್ಲಿ ತಾಲೂಕಿನ ಬೈರೇಗೊಲ್ಲಹಳ್ಳಿ ಬಳಿ ಖಾಸಗಿ ಬಸ್ ಪಲ್ಟಿಯಾಗಿ ಉರುಳಿ ಬಿದ್ದಿದೆ. ಓವರ್‍ ಟೇಕ್ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಮೂರು ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ. ಮತ್ತೋರ್ವ ಪ್ರಯಾಣಿಕ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಅಪಘಾತದಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡ ಪ್ರಯಾಣಿಕರನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ಅಪಘಾತಕ್ಕೆ ಒಳಗಾದ ಬಸ್ ಚೇಳೂರು-ಚಾಕುವೇಲು ಮಾರ್ಗವಾಗಿ ತೆರಳುತ್ತಿತ್ತು. ಈ ಬಸ್ ನಲ್ಲಿ ನಲವತ್ತು ಪ್ರಯಾಣಿಕರಿದ್ದರು. ಮತ್ತೊಂದು ಬಸ್ ಅನ್ನು ಓವರ್‍ ಟೇಕ್ ಮಾಡಲು ಹೋಗಿದ ಕಾರಣದಿಂದ ಈ ಅಪಘಾತ ಸಂಭವಿಸಿದೆ. ಉರುಳಿದ ಬಸ್ ಅನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಗಿದೆ. ಇನ್ನೂ ಘಟನಾ ಸ್ಥಳಕ್ಕೆ ಪಾತಪಾಳ್ಯ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ. ಇನ್ನೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಮುನಿರಾಜು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಪರಾಮರ್ಶಿಸಿದರು. ನಿಮ್ಮೊಂದಿಗೆ ತಾವಿರುವುದಾಗಿ ಭರವಸೆ ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.