News

ಸಿಗರೇಟ್ ಮಾರಾಟಗಾರರಿಗೆ ಎಚ್ಚರಿಕೆ, 21 ವರ್ಷಕ್ಕಿಂದ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರುವಂತಿಲ್ಲ: ಆರೋಗ್ಯ ಸಚಿವ

ಸದ್ಯ ಕರ್ನಾಟಕದ ವಿಧಾನಸಭೆಯ ಕಲಾಪ ನಡೆಯುತ್ತಿದ್ದು, ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ವಿಧೇಯಕ (ಜಾಹಿರಾತು ನಿಷೇಧ, ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಹಾಗೂ ವಿತರಣೆ ವಿನಿಮಯ ಕರ್ನಾಟಕ ತಿದ್ದುಪಡಿ ವಿಧೇಯಕ) ವನ್ನು ಅಂಗೀಕರಿಸಲಾಗಿದೆ. ಅದರಂತೆ 21 ವರ್ಷಕ್ಕಿಂದ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರುವಂತಿಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಸಂಬಂಧ ಸದನದಲ್ಲಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇನ್ನು ಮುಂದೆ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ. ಈ ಹಿಂದೆ ಸಿಗರೇಟ್ ಮಾರಾಟ ವಯೋಮಿತಿಯನ್ನು 18 ವರ್ಷಕ್ಕೆ ನಿಗಧಿಪಡಿಸಲಾಗಿತ್ತು. ಇದೀಗ ವಯಸ್ಸಿನ ಮಿತಿಯನ್ನು 21 ವರ್ಷಕ್ಕೆ ಹೆಚ್ಚಿಸಿದ್ದೇವೆ. ಆದ್ದರಿಂದ 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಜೊತೆಗೆ ಶಾಲೆಗಳಿಂದ 100 ಮೀಟರ್‍ ವ್ಯಾಪ್ತಿಯಲ್ಲಿ ಸಿಗರೇಟ್ ಮಾರಾಟ ಮಾಡುವಂತಿಲ್ಲ. ಒಂದು ವೇಳೆ ಮಾರಾಟ ಮಾಡಿದರೇ ದಂಡದ ಮೊತ್ತವನ್ನು 100 ರಿಂದ 1000 ರವರೆಗೆ ಏರಿಕೆ ಮಾಡಲಾಗಿದೆ ಎಂದರು.

ಈ ಸಮಯದಲ್ಲಿ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್‍.ಆಶೋಕ್ ಮಾತನಾಡಿ ನಿಮ್ಮ ನಿಲುವು ಸ್ವಾಗತಾರ್ಹ. ಆದರೆ ಈ ಕಾನೂನು ಇನ್ನೂ 5 ವರ್ಷ ಹೀಗೆ ಇರುತ್ತದೆ. ಆದ್ದರಿಂದ ದಂಡದ ಮೊತ್ತವನ್ನು 10 ಸಾವಿರಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಸಿಗರೇಟ್ ಮಾರುವವರು, ಅದೊಂದನ್ನೆ ಮಾರಾಟ ಮಾಡೋಲ್ಲ. ಕೆಲವು ಸಣ್ಣಪುಟ್ಟ ವ್ಯಾಪಾರಿಗಳೂ ಸಹ ಇರುತ್ತಾರೆ. ಅಂತಹವರಿಗೆ 10 ಸಾವಿರ ದಂಡ ಹಾಕಿದರೇ ಸಮಸ್ಯೆಯಾಗುತ್ತದೆ. ಆದ್ದರಿಂದ 1 ಸಾವಿರಕ್ಕೆ ಮಿತಿಗೊಳಿಸಿದ್ದೇವೆ. ಆದರೆ ಹುಕ್ಕಾ ಬಾರ್‍ ನಡೆಸುವವರು ಶ್ರೀಮಂತರಿದ್ದಾರೆ. ಆದ್ದರಿಂದ ಅವರಿಗೆ 50 ಸಾವಿರದಿಂದ 1 ಲಕ್ಷದವರೆಗೆ ದಂಡ ವಿಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Most Popular

To Top