News

ಆಪರೇಷನ್ ಸಾತ್ವಿಕ್ ಸಕ್ಸಸ್, ಬೋರ್ವೆಲ್ನಿಂದ ಮೃತ್ಯುಂಜಯನಾಗಿ ಹೊರಬಂದ ಸಾತ್ವಿಕ್….!

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಎಂಬ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ 2 ವರ್ಷದ ಮಗು ಸಾತ್ವಿಕ್ ನನ್ನು ನಿರಂತರ ಕಾರ್ಯಾಚರಣೆಯಿಂದ ರಕ್ಷಣೆ ಮಾಡಲಾಗಿದೆ. ಸುಮಾರು 20 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಮಗುವನ್ನು ಯಶಸ್ವಿಯಾಗಿ ಬೋರ್‍ ವೆಲ್ ನಿಂದ ಹೊರತೆಗೆದಿದ್ದಾರೆ. ರಕ್ಷಣಾ ಸಿಬ್ಬಂದಿಯ ಈ ಕಾರ್ಯಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ಮಹಾಪೂರವೇ ಹರಿದುಬರುತ್ತಿದೆ.

ಇಂಡಿ ತಾಲೂಕಿನ ಲಚ್ಯಾಣ ಎಂಬ ಗ್ರಾಮದಲ್ಲಿ ನಿವಾಸಿ ಶಂಕರಪ್ಪ ಮುಜಗೊಂಡ ಎಂಬ ರೈತ ತಮ್ಮ ಜಮೀನಿನಲ್ಲಿ ಮಂಗಳವಾರ ಕೊಳವೆ ಬಾವಿ ಕೊರೆಸಿದ್ದರು. ಸುಮಾರು 500 ಅಡಿ ಬೋರ್‍ ವೆಲ್ ಕೊರೆಲಾಗಿತ್ತು. ಆದರೆ ನೀರು ಬಾರದ ಕಾರಣ ಮುಚ್ಚದೇ ಹಾಗೇಯೆ ಬಿಟ್ಟಿದ್ದರು. ಶಂಕರಪ್ಪ ಮೊಮ್ಮಗ ಸಾತ್ವಿಕ್ ಆಟವಾಡಲು ಹೋಗಿ ಬುಧವಾರ ಕೊಳವೆ ಬಾವಿಗೆ ಬಿದ್ದಿದ್ದಾನೆ. ಈ 2 ವರ್ಷದ ಮಗು 15-20 ಅಡಿ ಆಳದಲ್ಲಿ ಸಿಲುಕಿದ ಶಂಕೆ ವ್ಯಕ್ತವಾಗಿತ್ತು. ಮಗುವಿನ ಪೋಷಕರಾದ ಸತೀಶ್ ಹಾಗೂ ಪೂಜಾ ಸೇರಿದಂತೆ ಸ್ಥಳೀಯರು ತಮ್ಮ ಮಗು ಜೀವಂತವಾಗಿ ಬದುಕಿ ಬರಬೇಕೆಂದು ದೇವರಲ್ಲಿ ತುಂಬಾನೆ ಪ್ರಾರ್ಥನೆಗಳನ್ನು ಮಾಡಿದ್ದರು. ನಿರಂತರ ಕಾರ್ಯಾಚರಣೆ ನಡೆಸಿದ ರಕ್ಷಣಾ ಸಿಬ್ಬಂದಿ ಮಗುವನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಬೋರ್‍ ವೆಲ್ ನಿಂದ ಹೊರತೆಗೆದ ಸಾತ್ವಿಕ್ ನನ್ನು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನೂ ಎನ್.ಡಿ.ಆರ್‍.ಎಫ್ ತಂಡ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಅಗ್ನಿಶಾಮಕ ದಳ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ತಂಡ, ಸ್ಥಳೀಯ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಮಗುವನ್ನು ಕೊಳವೆ ಬಾವಿಯಿಂದ ಹೊರ ತೆಗೆಯುತ್ತಿದ್ದಂತೆ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಆಂಬುಲೆನ್ಸ್ ಮೂಲಕ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಕೊಳವೆ ಬಾವಿಗೆ ಸಿಸಿ ಕ್ಯಾಮೆರಾ ಕಳುಹಿಸಲಾಗಿತ್ತು. ಈ ವೇಳೆ ಮಗು ಬದುಕಿರುವುದು ಕಂಡು ಬಂದಿತ್ತು. ಅಂತಿಮ ಹಂತದ ಕಾರ್ಯಾಚರಣೆಯ ವೇಳೆ ಮಗು ಅಳುತ್ತಿರುವ ಶಬ್ದ ರಕ್ಷಣಾ ಸಿಬ್ಬಂದಿಗೆ ಕೇಳಿಸುತ್ತಿತ್ತು. ಎಲ್ಲರ ಪ್ರಾರ್ಥನೆ ಫಲಿಸಿದ್ದು, ಇದೀಗ ಮಗು ಜೀವಂತವಾಗಿ ಹೊರಬಂದಿದೆ. ಈ ಹಿಂದೆ ಸಹ ವಿಜಯಪುರ ವ್ಯಾಪ್ತಿಯಲ್ಲಿ 2 ಕೊಳವೆ ಬಾವಿ ದುರಂತಗಳು ನಡೆದಿತ್ತು.

Most Popular

To Top