health-Kannada

ಅರಳಿಮರದಿಂದ ಏನೆಲ್ಲಾ ಉಪಯೋಗಗಳಿವೆ ಗೊತ್ತಾ?

ಭಾರತೀಯರಿಗೆಲ್ಲರಿಗೂ ಪವಿತ್ರವೆಂದು ಪರಿಗಣಿತವಾದ ಮರ ಅರಳಿಮರ. ಈ ಮರವನ್ನು ಹಲವಾರು ಹೆಸರುಗಳಿಂದ ಕರೆಯಲ್ಪಡುತ್ತಾರೆ. ಭೋದಿವೃಕ್ಷ, ಪೀಪಲ್, ಅರಳಿ ಮುಂತಾಗಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಹೆಸರುಗಳಿವೆ. ಈ ಮರದ ಕೆಳಗೆ ಕುಳಿತು ಧ್ಯಾನದಲ್ಲಿ ನಿರತರಾಗಿರುವಾಗಲೇ ಗೌತಮಬುದ್ಧರಿಗೆ ಜ್ಞಾನೋದಯವಾಯಿತು ಎಂದು ಪ್ರತೀತಿ. ಭಾರತದ ಎಲ್ಲಾ ಕಡೆ ಈ ಮರ ಬೆಳೆಯುತ್ತದೆ.

ಹಳ್ಳಿಗಳಲ್ಲಿ ಅಶ್ವತ್ಥಕಟ್ಟೆಯಲ್ಲಿ ಬೆಳೆದು ಶೋಭಿಸುವ ಪವಿತ್ರ ಪೂಜಾ ವೃಕ್ಷ. ಇದರ ಎಲೆಗಳು ವೀಳ್ಯದೆಲೆಯನ್ನು ಹೋಲುತ್ತದೆ. ಆದರೆ ತುದಿ ಚೂಪಾಗಿ ಉದ್ದವಾಗಿರುತ್ತದೆ. ಇದರ ಎಲೆಗಳು ಹೊಳಪಾಗಿದ್ದು, ನರಗಳು ಸ್ವಷ್ಟವಾಗಿ ಕಾಣುತ್ತವೆ. ಎಳೆ ಎಲೆಯ ಕುಡಿಗಳು ತಿಳಿಕೆಂಪು ಬಣ್ಣವನ್ನು ಹೊಂದಿರುತ್ತವೆ. ಇದು ದೊಡ್ಡಮರ, ಕವಲುಗಳು ಅಗಲವಾಗಿ ಹರಡುತ್ತವೆ. ಕಾಯಿಗಳು ಹಸಿರಾಗಿದ್ದು, ಒಣಗಿದ ಮೇಲೆ ಕಂದು ವರ್ಣವನ್ನು ಹೊಂದುತ್ತವೆ. ಕಾಯಿಯ ತುಂಬ ಸಣ್ಣ ಸಣ್ಣ ಬೀಜಗಳಿರುತ್ತವೆ. ಈ ಕಾಯಿಗಳನ್ನು ಹಕ್ಕಿಪಕ್ಷಿಗಳು ತಿಂದು ತೃಪ್ತಿಪಡುತ್ತವೆ ಮತ್ತು ಬೀಜ ಪ್ರಸಾರದಲ್ಲಿ ನೆರವಾಗುತ್ತವೆ.

ಅರಳಿಮರದಿಂದ ಸಿಗುವ ಉಪಯೋಗಗಳು :-

ದಾಂಪತ್ಯ ಸುಖ :-

ಅರಳೀ ಮರದ ಒಳ ತಿರುಳು, ಪತ್ರೆ, ಕಾಯಿ ಮತ್ತು ಬೇರು ಸಮತೂಕ ನೆರಳಲ್ಲಿ ಒಣಗಿಸಿ, ನುಣ್ಣಗೆ ಅರೆದು ವಸ್ತ್ರಗಾಳಿತ ಚೂರ್ಣ ಮಾಡುವುದು. ರಾತ್ರಿ ಮಲಗುವಾಗ ಸುಮಾರು 5 ಗ್ರಾಂ ಚೂರ್ಣವನ್ನು ಕಾಯಿಸಿದ ಹಸುವಿನ ಹಾಲು ಹಾಗೂ ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸಬಹುದು. ಈ ಚೂರ್ಣವು ಶಕ್ತಿದಾಯಕವೂ ಮತ್ತು ದಾಂಪತ್ಯ ಸುಖವನ್ನು ಕೊಡುವಂತಹುದೂ ಆಗಿದೆ.

ಮಲೇರಿಯ ಜ್ವರದಲ್ಲಿ :-

100ಗ್ರಾಂ ಅರಳೀಮರದ ತೊಗಟೆಯನ್ನು ಸುಟ್ಟು ಬೂದಿಯನ್ನು ಒಂದು ಲೀಟರ್ ನೀರನಲ್ಲಿ ಕದಡಿ, ಸ್ವಲ್ಪ ಹೊತ್ತು ಹಾಗೆ ಇಟ್ಟಿರುವುದು. ಅನಂತರ ತಿಳಿಯಾದ ನೀರನ್ನು ಬಸೆದು, ಒಣಮಡಿಕೆಯಲ್ಲಿಡುವುದು. ಮಲೇರಿಯ ಜ್ವರ ಪೀಡಿತರು ಆಗಾಗ ವಾಂತಿ ಮಾಡುತ್ತಿದ್ದರೆ, ಬಿಕ್ಕಳಿಕೆ ಬಾಯಾರಿಕೆಯಿಂದ ಬಹಳ ನಿಶ್ಯಕ್ತರಾದರೆ ಈ ನೀರನ್ನು 5-6 ಟೀ ಚಮಚ ಆಗಾಗ ಕುಡಿಸುತ್ತಿರುವುದು.

ಗಾಯಗಳಿಗೆ :-

ಎಳೆಯ ಅರಳೀ ಎಲೆಗಳಿಗೆ ಹಸುವಿನ ತುಪ್ಪವನ್ನು ಸವರಿ, ಬಿಸಿ ಮಾಡಿ, ಗಾಯಗಳು ಮಾಗಿ, ಒಡೆಯುವುವು ಮತ್ತು ಕೀವು ಸುರಿದು ಹೋಗಿ ಬಹುಬೇಗನೆ ವಾಸಿಯಾಗುತ್ತದೆ. ಸುಟ್ಟು ಗಾಯಗಳಿಗೆ ಅರಳೀಮರದ ತೊಗಟೆಯ ನಯವಾದ ಚೂರ್ಣವನ್ನು ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಹಚ್ಚಬೇಕು. ಅಥವಾ ಅರಳೀ ಮರದ ಎಲೆಗಳನ್ನು ಸುಟ್ಟು ಭಸ್ಮ ಮಾಡಿ ಕೊಬ್ಬರಿ ಎಣ್ಣೆಯಲ್ಲಿ ಕಲೆಸಿ ಲೇಪಿಸುವುದು.

ಕಾಲಿನ ಹಿಮ್ಮಡಿಗಳು ಒಡೆದಿದ್ದರೆ :-

ಅರಳೀ ಮರದ ಎಲೆಗಳನ್ನು ಮುರಿದಾಗ ಬರುವ ಹಾಲನ್ನು ಹಿಮ್ಮಡಿಯ ಸೀಳುಗಳಲ್ಲಿ ತುಂಬುವುದು. ಇದರಿಂದ ನೋವು ಶಮನವಾಗಿ, ಹಿಮ್ಮಡಿಯ ಸೀಳುಗಳನ್ನು ಕೂಡಿಕೊಳ್ಳುವುವು.

ಹಿಸ್ಟೀರಿಯ ತಡೆಗಟ್ಟಲು :-

ಚೆನ್ನಾಗಿ ಪಕ್ವವಾದ 250 ಗ್ರಾಂ ಅರಳೀಮರದ ಕಾಯಿಗಳನ್ನು ತಂದು, ನೆರಳಲ್ಲಿ ಒಣಗಿಸಿ, ನಯವಾದ ಚೂರ್ಣ ಮಾಡಿಟ್ಟುಕೊಳ್ಳಬೇಕು. 40 ಗ್ರಾಂ ಚೂರ್ಣಕ್ಕೆ ಜಾಯಿಪತ್ರೆ, ಜಟಮಾಂಷಿ 20 ಗ್ರಾಂ ಸೇರಿಸಿ, ಕಲ್ಪತ್ತಿನಲ್ಲಿ ಹಾಕಿ, ನೀರನ್ನು ಚುಮುಕಿಸಿ, ನಯವಾಗಿ ಅರೆಯಬೇಕು. ಇದಕ್ಕೆ 20 ಗ್ರಾಂ ಉತ್ತಮವಾದ ಕಸ್ತೂರಿಯನ್ನು ಸೇರಿಸಿ ಮತ್ತೊಮ್ಮೆ ನಯವಾಗಿ ಅರೆದು, ಗುಲಗಂಜಿ ಗಾತ್ರದ ಮಾತ್ರೆಗಳನ್ನು ಮಾಡಿ, ನೆರಳಲ್ಲಿ ಒಣಗಿಸಿ ಶೇಖರಿಸಿ ಇಡಬೇಕು. ಅಪಸ್ಮಾರದಿಂದ ನರಳುವ ಸ್ತ್ರೀಯರಿಗೆ 2 ರಿಂದ 3 ಮಾತ್ರೆಗಳನ್ನು ನೀರಿನೊಂದಿಗೆ ಕೊಡಬೇಕು. ಒಂದು ತಾಸು ಆದ ನಂತರ ಕಾದಾರಿದ ಹಸುವಿನ ಹಾಲನ್ನು ಕುಡಿಸುವುದು.

ಅತಿಯಾದ ಜ್ವರ ಮತ್ತು ಬಿಕ್ಕಳಿಕೆ :-

ಅರಳೀಮರದ ಚೆಕ್ಕೆಯನ್ನು ಹೊತ್ತಿಸಿ, ಉರಿಯುತ್ತಿರುವ ಕೊಳ್ಳಿಯನ್ನು ತಣ್ಣೀರಿನಲ್ಲಿ ಅದ್ದುವುದು ನೀರು ತಣ್ಣಗಾದ ಮೇಲೆ ಬಟ್ಟೆಯಲ್ಲಿ ಸೋಸಿ, ಎರಡೆರಡು ಟೀ ಚಮಚ ಕುಡಿಸುವುದು, ಬರೇ ಬಿಕ್ಕಳಿಕೆಯಲ್ಲಿ ಸಹ ಈ ರೀತಿಯ ಔಷಧಿಯನ್ನು ಉಪಯೊಗಿಸಬಹುದು. ಬೆಂಕಿ, ಎಣ್ಣೆ ಮತ್ತು ನೀರುಗಳಿಂದಾದ ಸುಟ್ಟ ಗಾಯಗಳಿಗೆ ಅರಳೀ ಮರದ ತೊಗಟೆಯ ನಯವಾದ ಚೂರ್ಣವನ್ನು ಗಾಯಗಳ ಮೇಲೆ ಸಿಂಪಡಿಸುವುದು.

Most Popular

To Top