ಹೈದರಾಬಾದ್: ಟಾಲಿವುಡ್ ನ ಮೆಗಾ ಫ್ಯಾಮಿಲಿಯ ನಟ ವರುಣ್ ತೇಜ್ ರವರ ಬಹುನಿರೀಕ್ಷೆಯ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆಯಾಗಿದೆ. ವರುಣ್ ತೇಜ್ ರವರ ಹುಟ್ಟುಹಬ್ಬದ ದಿನದಂದು ಗನಿ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ.
ಮೆಗಾ ಫ್ಯಾಮಿಲಿಯ ಭರವಸೆಯ ನಟ ಎಂದೇ ಕರೆಯಲಾಗುವ ವರುಣ್ ತೇಜ್ ರವರ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಸರಳವಾಗಿ ಆಚರಿಸಿಕೊಂಡಿದ್ದಾರೆ. ಜೊತೆಗೆ ನಟ ರಾಮ್ ಚರಣ್ ಸಿನೆಮಾ ಪೋಸ್ಟರ್ ಬಿಡುಗಡೆ ಮಾಡಿ ಸಹೋದರ ವರುಣ್ ಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದ್ದಾರೆ.
ವರುಣ್ ತೇಜ್ ಇಂದಿಗೆ ೩೧ ನೇ ವಸಂತಕ್ಕೆ ಕಾಲಿಡುತ್ತಿದ್ದು, ಇಂದು ಬಿಡುಗಡೆಯಾದ ಗನಿ ಚಿತ್ರದ ಪೋಸ್ಟರ್ ನಲ್ಲಿ ವರುಣ್ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ವರುಣ್ ತೇಜ್ ರವರ ಈ ಪೋಸ್ಟರ್ ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇನ್ನೂ ಈ ಚಿತ್ರವನ್ನು ಕಿರಣ್ ಕೊರಪತಿ ಎಂಬ ನಿರ್ದೇಶಕ ನಿರ್ದೇಶನ ಮಾಡುತ್ತಿದ್ದು, ಇದು ಅವರ ಮೊದಲ ಚಿತ್ರವಾಗಿದೆ. ಇನ್ನು ವರುಣ್ ತೇಜ್ ಈ ಪಾತ್ರ ಪೋಷಿಸಲು ಮುಂಬೈನ ತರಬೇತುದಾರರ ನಿರ್ದೇಶನದಂತೆ ವರ್ಕೌಟ್ ಮಾಡಿದ್ದಾರೆ. ಜೊತೆಗೆ ಬಾಕ್ಸಿಂಗ್ ಅನ್ನು ಲಾಸ್ ಏಂಜಲ್ಸ್‌ನ ಟ್ರೈನರ್ ಒಬ್ಬರಿಂದ ಕಲಿತುಕೊಂಡಿದ್ದಾರೆ.
ಅಂದಹಾಗೆ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್‌ನ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಈ ಪಾತ್ರ ಹೇಗಿರಲಿದೆ ಎಂಬ ಕೌತುಕ ಉಪ್ಪಿ ಅಭಿಮಾನಿಗಳಲ್ಲಿ ಹುಟ್ಟಿದೆ. ಕೆಲವೊಂದು ಮೂಲಗಳ ಪ್ರಕಾರ ವರುಣ್ ತೇಜ್ ರವರಿಗೆ ಬಾಕ್ಸಿಂಗ್ ಟ್ರೈನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಬಹಿರಂಗವಾಗಿಲ್ಲ.