Film News

ಶಿವ ಸೇನಾ ಪಕ್ಷ ಸೇರಿದ ನಟಿ ಊರ್ಮಿಳಾ

ಮುಂಬೈ: ಸುಮಾರು ೨ ದಶಕಗಳ ಕಾಲ ಬಾಲಿವುಡ್ ಸಿನಿರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟಿ ಊರ್ಮಿಳಾ ಮಾತೋಂಡ್ಕರ್ ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು, ಕಾಂಗ್ರೇಸ್ ಪಕ್ಷದ ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟು, ಪ್ರಸ್ತುತ ಶಿವಸೇನಾ ಪಕ್ಷವನ್ನು ಸೇರಿಕೊಂಡಿದ್ದಾರೆ ಎನ್ನಲಾಗಿದೆ.

ನಟಿ ಊರ್ಮಿಳಾ ೧೯೭೭ ರಲ್ಲಿ ಬಾಲ ನಟಿಯಾಗಿ ಸಿನಿ ಕ್ಷೇತ್ರಕ್ಕೆ ಕಾಲಿಟ್ಟು, ತೆಲುಗು, ಮಲಯಾಳಂ, ಮರಾಠಿ, ತಮಿಳು ಸಿನೆಮಾಗಳಲ್ಲಿ ನಟಿಸಿ ಸ್ಟಾರ್ ನಟಿಯಾಗಿ ಮಿಂಚಿದ್ದರು. ೪೬ ವರ್ಷದ ಊರ್ಮಿಳಾ ರವರು ಪ್ರಸ್ತುತ ಸಿನಿಕ್ಷೇತ್ರಕ್ಕೆ ದೂರವಾಗಿದ್ದಾರೆ. ೨೦೧೮ರಲ್ಲಿ ತೆರೆಕಂಡ ಬ್ಲಾಕ್ಮೈಲ್ ಚಿತ್ರದಲ್ಲಿ ಒಂದು ಐಟಂ ಸಾಂಗ್ ಮಾಡಿದ್ದು ಅವರು ಕೊನೆಯ ನಟನೆಯಾಗಿದೆ. ನಂತರ ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಟಿಕೆಟ್ ಪಡೆದು, ಮುಂಬೈ ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಬಿಜೆಪಿ ಅಭ್ಯರ್ಥಿಯ ಎದುರು ಸೋಲು ಕಂಡಿದ್ದರು. ನಂತರದ ದಿನಗಳಲ್ಲಿ ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳಿಂದ ಪಕ್ಷದಿಂದ ದೂರವುಳಿದಿದ್ದರು ಎನ್ನಲಾಗಿದೆ.

ಕೆಲವು ದಿನಗಳಿಂದ ಊರ್ಮಿಳಾ ರವರು ಶಿವಸೇನಾ ಪಕ್ಷವನ್ನು ಸೇರಿಕೊಳ್ಳಲಿದ್ದಾರೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಮ್ಮುಖದಲ್ಲಿ ಅಧಿಕೃತವಾಗಿ ಶಿವ ಸೇನಾ ಪಕ್ಷವನ್ನು ಸೇರಿಕೊಂಡಿದ್ದಾರಂತೆ.

ಇನ್ನೂ ಊರ್ಮಿಳಾ ರವರು ಪಕ್ಷವನ್ನು ಸೇರಿಕೊಂಡಿದ್ದರಿಂದ ಶಿವಸೇನಾ ಮಹಿಳಾ ಘಟಕ ಶಕ್ತಿಯುತವಾಗಿದೆ. ಊರ್ಮಿಳಾ ಈಗ ಶಿವಸೈನಿಕ್ ಆಗಿದ್ದಾರೆ ಎಂದು ಪಕ್ಷದ ಮುಖಂಡ ಸಂಜಯ್ ರಾವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ವಿಧಾನಪರಿಷತ್ ಸದಸ್ಯೆಯನ್ನಾಗಿ ಊರ್ಮಿಳಾರವರನ್ನು ಆಯ್ಕೆ ಮಾಡಲು ಶಿವಸೇನಾ ಪಕ್ಷ ಸಕಲ ಸಿದ್ದತೆಗಳನ್ನು ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.

Trending

To Top