ಭಾರತದ ಹೆಸರಾಂತ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಆಗಸ್ಟ್ 5ರಂದು ಕರೊನಾ ಸೋಂಕು ಪಾಸಿಟಿವ್ ಬಂದ ಕಾರಣ ಚೆನ್ನೈನ ಎಂ.ಜಿ.ಎಂ ಹೆಲ್ತ್ ಕೇರ್ ಗೆ ದಾಖಲಾಗಿದ್ದರು. ಆಸ್ಪತ್ರೆಯಿಂದಲೇ ವಿಡಿಯೋ ಮಾಡಿದ್ದ ಗಾಯಕ, ತಮಗೆ ಹೆಚ್ಚಿನ ತೊಂದರೆ ಆಗಿಲ್ಲ, ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ ಎಂದಿದ್ದರು.ಆದರೆ, ಆಗಸ್ಟ್ 13 ರಂದು ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ಕಳೆದ ಶುಕ್ರವಾರ ಅವರನ್ನು ಐಸಿಯು ಗೆ ಸ್ಥಳಾಂತರಿಸಲಾಗಿತ್ತು. ಎಂಜಿಎಂ ಹೆಲ್ತ್ ಕೇರ್ ಇಂದ ಶನಿವಾರ ಸಿಕ್ಕಿದ್ದ ಮಾಹಿತಿ ಪ್ರಕಾರ. “ಕೋವಿಡ್ 19 ಇಂದಾಗಿ ಎಂಜಿಎಂ ಹೆಲ್ತ್ಕೇರ್ ಗೆ ದಾಖಲಾಗಿದ್ದ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆಸಲಾಗುತ್ತಿದೆ.
ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ವೈದ್ಯರು ಅವರ ಆರೋಗ್ಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ..” ಎಂದು ತಿಳಿಸಿದ್ದರು..ಜೊತೆಗೆ ಎಸ್.ಪಿ.ಬಿ ಅವರ ಮಗ ಸಹ ತಂದೆಯ ಆರೋಗ್ಯ ಸುಧಾರಿಸಿದೆ, ವೆಂಟಿಲೇಟರ್ ಸಹಾಯವಿಲ್ಲದೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಭಾನುವಾರ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದರು. ಆದರೆ ಇದೀಗ ಮತ್ತೆ ಎಸ್.ಪಿ.ಬಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಅವರಿಗೆ ಐಸಿಯು ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ, ಎಸ್.ಪಿ.ಬಿ ಅವರ ಅಭಿಮಾನಿಗಳು ಹಾಗೂ ಇತರ ಸೆಲೆಬ್ರಿಟಿಗಳು ಎಸ್.ಪಿ.ಬಿ ಅವರು ಬೇಗ ಸುಧಾರಿಸಿಕೊಳ್ಳಲಿ ಎಂದು ಟ್ವೀಟ್ ಮಾಡುತ್ತಲಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜನಪ್ರಿಯ ಗಾಯಕಿ ಶ್ರೇಯಾ ಘೋಷಲ್ “ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅವರು ಗುಣಮುಖರಾಗಿ ಬಂದು ಅವರ ಅದ್ಭುತ ಕಂಠದಿಂದ ನಮ್ಮನ್ನು ರಂಜಿಸಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದಿದ್ದಾರೆ. ಜೊತೆಗೆ ತಮಿಳು ನಟ ಕಾರ್ತಿಯವರು ಟ್ವೀಟ್ ಮಾಡಿ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರು ಬೇಗ ಗುಣಮುಖರಾಗಲಿ..” ಎಂದು ಟ್ವೀಟ್ ಮಾಡಿದ್ದಾರೆ. ಎಸ್.ಪಿ.ಬಿ ಅವರು ಬೇಗ ಚೇತರಿಸಿಕೊಳ್ಳಲಿ ಎಂದು ಅವರ ಅಭಿಮಾನಿಗಳೆಲ್ಲರೂ ಟ್ವೀಟ್ ಮಾಡುವ ಮೂಲಕ ಟ್ವಿಟರ್ ಟ್ರೆಂಡ್ ಮಾಡಿದ್ದಾರೆ. ಎಸ್.ಪಿ.ಬಿ ಅವರ ಚೇತರಿಕೆ ಬಗ್ಗೆ ದೇಶಾದ್ಯಂತ ಪ್ರಾರ್ಥನೆ ನಡೆಯುತ್ತಿದ್ದ, ಮಹಾನ್ ಗಾಯಕರಿಗೆ ಐಸಿಯು ನಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದಷ್ಟು ಬೇಗ ಅವರು ಚೇತರಿಸಿಕೊಂಡು ಬರಲಿ ಎಂದು ಪ್ರಾರ್ಥಿಸೋಣ.
