ಹೈದರಾಬಾದ್: ಬಹುತೇಕ ಎಲ್ಲಾ ಸಿನೆಮಾಗಳಲ್ಲಿ ಖಳನಾಯಕನ ಪಾತ್ರದಲ್ಲಿ ನಟಿಸುತ್ತಿದ್ದ ನಟ ಸೋನು ಸೂದ್ ನಿಜಜೀವನದಲ್ಲಿ ರಿಯಲ್ ಹಿರೋ ಎಂದು ಪ್ರಖ್ಯಾತಿ ಪಡೆದಿದ್ದು, ಅನೇಕ ಸಾಮಾಜಿಕ ಕೆಲಸಗಳನ್ನು ಮಾಡಿ ಮಾನವೀಯ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದಾರೆ.
ಇದೀಗ ನಟ ಸೋನು ಸೂದ್ ಆಚಾರ್ಯ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ತಿಳಿದಿದ್ದು, ಆಚಾರ್ಯ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದ 100 ಮಂದಿ ಕಾರ್ಮಿಕರಿಗೆ ಮೊಬೈಲ್ ಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಸೋನು ಮತ್ತೊಮ್ಮೆ ಹಿರೋ ಎನ್ನಿಸಿಕೊಂಡಿದ್ದಾರೆ. ಆಚಾರ್ಯ ಚಿತ್ರದ ಸೆಟ್ ನಲ್ಲಿ ಕೆಲಸ ಮಾಡುವಂತಹ ಕಾರ್ಮಿಕರ ಬಳಿ ಸ್ಮಾರ್ಟ್ ಮೊಬೈಲ್ ಗಳಿಲ್ಲ ಎಂಬ ವಿಷಯ ತಿಳಿದ ಸೋನು ತಕ್ಷಣ ಎಲ್ಲರಿಗೂ ಪೋನುಗಳನ್ನು ತರೆಸಿ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈ ಮೊಬೈಲ್ ಪೊನ್ ನೀಡಲು ಮತ್ತೊಂದು ಕಾರಣವಿದ್ದು, ಅದು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲಿ ಎಂಬುದು ಸೋನು ರವರ ಮುಖ್ಯ ಉದ್ದೇಶವಂತೆ. ಇನ್ನೂ ಈ ಸಂಬಂಧ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಸೋನು ಸೂದ್ ಹೇಳಿದಂತೆ ನಟ ಚಿರಂಜೀವಿ ನನ್ನ ಮೇಲೆ ಕೈ ಮಾಡಲು ಹಿಂದೆಟು ಹಾಕಿದ್ದರು ಎಂದಿದ್ದರು. ಆಚಾರ್ಯ ಚಿತ್ರದಲ್ಲಿ ಸೋನು ಸೂದ್ ಖಳನಾಯಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಂದಹಾಗೆ ತೆಲಂಗಾಣದ ಗ್ರಾಮವೊಂದರಲ್ಲಿ ಸೋನು ಸೂದ್ ರವರಿಗೆ ದೇವಾಲಯ ಸಹ ಕಟ್ಟಿಸಿದ್ದಾರೆ.
