Film News

ರಾಜ್ಯ ಸರ್ಕಾರಕ್ಕೆ ಸ್ಯಾಂಡಲ್ವುಡ್ ನಟರ ಪ್ರಶ್ನೆ! ಸರ್ಕಾರ ಆದೇಶದ ವಿರುದ್ದ ಅಸಮಧಾನ

ಬೆಂಗಳೂರು: ಕೇಂದ್ರ ಸರ್ಕಾರದ ಹೊಸ ಕೋವಿಡ್ ಮಾರ್ಗಸೂಚಿಗಳನ್ವಯ ಸಿನೆಮಾ ಮಂದಿರಗಳಲ್ಲಿ ಶೇ.100 ರಷ್ಟು ಆಸನಗಳ ಭರ್ತಿಗೆ ಅವಕಾಶ ನೀಡಿದ್ದು, ಕರೋನಾ ಎರಡನೇ ಅಲೆ ಎಂಬ ಕಾರಣದಿಂದ ಕರ್ನಾಟಕ ರಾಜ್ಯದಲ್ಲಿ ಈ ಹಿಂದಿದ್ದ ನಿಯಾಮವಳಿಗಳೇ ಜಾರಿಯಲ್ಲಿದ್ದು, ಇದರಿಂದ ನಟ ಪುನೀತ್ ರಾಜ್‌ಕುಮಾರ್, ಧ್ರುವ ಸರ್ಜಾ ಸೇರಿದಂತೆ ಅನೇಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಕೊರೋನಾ ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ಸರ್ಕಾರ ಲಾಕ್‌ಡೌನ್ ಹೇರಿಕೆ ಮಾಡಿತ್ತು. ಇದರ ಭಾಗವಾಗಿ ಹೆಚ್ಚು ಜನ ಸೇರುವ ಪ್ರದೇಶಗಳನ್ನು ಸಹ ಲಾಕ್‌ಡೌನ್ ಮಾಡಲಾಗಿತ್ತು. ಲಾಕ್‌ಡೌನ್ ಸಡಿಲಿಕೆ ನಂತರ ಕೆಲವೊಂದು ಮಾರ್ಗಸೂಚಿಗಳನ್ವಯ ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಕೇಂದ್ರ ಸರ್ಕಾರ ಅವಕಾಶ ನೀಡಿ ಆದೇಶ ಮಾಡಿದೆ. ಆದರೆ ರಾಜ್ಯ ಸರ್ಕಾರ ಮಾತ್ರ ಕೊರೋನಾ ಎರಡನೇ ಅಲೆ ಬರುವ ಸಾಧ್ಯತೆಯಿರುವುದರಿಂದ ಶೇ.೫೦ ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ನೀಡಿದೆ.

ಇನ್ನೂ ಸರ್ಕಾರದ ನಡೆಯನ್ನು ಟ್ವಿಟರ್ ಮೂಲಕ ಖಂಡಿಸಿರುವ ನಟ ಪುನೀತ್ ರಾಜ್‌ಕುಮಾರ್ ಸರ್ಕಾರ ಖಾಸಗಿ ಕಾರ್ಯಕ್ರಮಗಳು, ಪೂಜಾ ಸ್ಥಳಗಳು, ಸಾರ್ವಜನಿಕ ಸಾರಿಗೆ, ಮಾರುಕಟ್ಟೆಗಳು ಎಲ್ಲಾ ಸ್ಥಳಗಳಲ್ಲಿ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಾರೆ. ಆದರೆ, ಚಿತ್ರಮಂದಿರಗಳಿಗೆ ಮಾತ್ರ ಏಕೆ ಅವಕಾಶವಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಪುನೀತ್ ರಾಜ್ ಕುಮಾರ್ ಟ್ವೀಟ್ ಗೆ ಅಭಿಮಾನಿಗಳ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದ್ದಾರೆ.

ಇನ್ನೂ ನಟ ಧ್ರುವ ಸರ್ಜಾ ಸಹ ಈ ಕುರಿತು ಧ್ವನಿ ಎತ್ತಿದ್ದು, ಮಾರ್ಕೆಟ್‌ನಲ್ಲಿ, ಬಸ್‌ಗಳಲ್ಲೂ ಜನ ಗಿಜಿಗಿಜಿ ಇರುತ್ತಾರೆ. ಆದರೆ ಚಿತ್ರಮಂದಿರಕ್ಕೆ ಮಾತ್ರ ಏಕೆ ೫೦% ನಿರ್ಬಂಧ ಎಂದು ಮುಖ್ಯಮಂತ್ರಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ್ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ರವರನ್ನು ಪ್ರಶ್ನೆ ಮಾಡಿದ್ದಾರೆ. ಇನ್ನೂ ಇದೇ ರೀತಿಯಲ್ಲಿ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ದುನಿಯಾ ವಿಜಯ್, ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಸಿನೆಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.

ಇನ್ನೂ ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ಜನರ ಆರೋಗ್ಯಕ್ಕಿಂತ ಮನರಂಜನೆ ಮುಖ್ಯವಲ್ಲ. ಸಿನೆಮಾ ಥಿಯೇಟರ್‌ಗಳು ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸೋಂಕು ಬಹುಬೇಗ ಹರಡುವ ಸಾಧ್ಯತೆಯಿದೆ. ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದೇವೆ. ಏಕಾಏಕಿ ನಾನು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮತ್ತೊಮ್ಮೆ ಸಿಎಂ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

Trending

To Top