Cinema

ಕನ್ನಡ ಸಿನಿಮಾಗಳ ಪ್ರಚಾರ ಮಾಡಲ್ವಾ ರಶ್ಮಿಕಾ ಮಂದಣ್ಣ? ಅಸಲಿ ಕಾರಣ ಏನು ಗೊತ್ತಾ

ಕಿರಿಕ್ ಪಾರ್ಟಿ ಸಾನ್ವಿ ರಶ್ಮಿಕಾ ಮಂದಣ್ಣ, ಕನ್ನಡ ಚಿತ್ರದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟು, ನಂತರ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ಈ ನಟಿ, ಅಲ್ಲಿ ಕೂಡ ಬಹಳ ಫೇಮಸ್. ಕನ್ನಡಕ್ಕಿಂತಲೂ ತೆಲುಗಿನಲ್ಲೇ ಈಕೆಗೆ ಬಹಳ ಬೇಡಿಕೆ ಇದೆ. ತೆಲುಗು ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡು ಸ್ಟಾರ್ ನಟಿ ಪಟ್ಟ ಗಳಿಸಿದ್ದಾರೆ ರಶ್ಮಿಕಾ. ಕಾಲಿವುಡ್ ಗು ಸಹ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಆದರೆ ಈ ನಟಿಗೆ ಮಾತೃಭಾಷೆ ಕನ್ನಡ ಮತ್ತು ವೃತ್ತಿಜೀವನಕ್ಕೆ ಎಂಟ್ರಿ ನೀಡಿದ ಕನ್ನಡ ಸಿನಿಮಾರಂಗ ಎಂದರೆ ತಾತ್ಸಾರ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗ್ತಿದೆ. ಇದಕ್ಕೆ ಕಾರಣ, ಪೊಗರು ಸಿನಿಮಾದ ಪ್ರೊಮೋಷನ್ ಕೆಲಸಗಳಲ್ಲಿ ರಶ್ಮಿಕಾ ಪಾಲ್ಗೊಳ್ಳದೆ ಇರುವುದು.

2020ರಲ್ಲಿ ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಪೊಗರು. ಒಂದು ಹಾಡಿನಿಂದಲೇ ಸ್ಯಾಂಡಲ್ ವುಡ್ ಮತ್ತು ಟಾಲಿವುಡ್ ಎರಡು ಚಿತ್ರರಂಗದಲ್ಲೂ ಸಹ ಸಖತ್ ಕ್ರೇಜ್ ಸೃಷ್ಟಿಸಿದೆ ಪೊಗರು ಸಿನಿಮಾ. ಕರಾಬು ಕನ್ನಡ ಹಾಗೂ 115ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆ ಪಡೆದಿದ್ದು, ಅತಿ ಕಡಿಮೆ ಸಮಯದಲ್ಲಿ ಇಷ್ಟು ವೀಕ್ಷಣೆ ಪಡೆದಿರುವ ಮೊದಲ ಕನ್ನಡ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾದ ನಾಯಕಿ ರಶ್ಮಿಕಾ ಮಂದಣ್ಣ. ಆದರೆ ಈ ನಟಿ, ಇದುವರೆಗೂ ಸಹ ಪೊಗರು ಸಿನಿಮಾ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ಪೋಸ್ಟ್ ಸಹ ಹಂಚಿಕೊಂಡಿಲ್ಲ. ಪೊಗರು ಹಾಡು 100ಮಿಲಿಯನ್ ವೀಕ್ಷಣೆ ಪಡೆದ ವಿಷಯವಾಗಲಿ, ಪೊಗರು ತೆಲುಗಿಗೆ ಡಬ್ ಆಗುತ್ತಿರುವ ವಿಷಯವಾಗಲಿ ಯಾವುದರ ಬಗ್ಗೆಯೂ ಸಹ ರಶ್ಮಿಕಾ ಪೋಸ್ಟ್ ಮಾಡಿಲ್ಲ.

ಆದರೆ ತಾವು ನಟಿಸುವ ತೆಲುಗು ಸಿನಿಮಾಗಳ ಬಗ್ಗೆ ಸಾಕಷ್ಟು ಅಪ್ಡೇಟ್ ಗಳನ್ನು ನೀಡುತ್ತಾರೆ. ತೆಲುಗು ಚಿತ್ರರಂಗದ ಕಲಾವಿದರ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಾರೆ, ಅವರ ಸಿನಿಮಾಗಳ ಬಗ್ಗೆ ಪೋಸ್ಟ್ ಮಾಡುತ್ತಾರೆ. ಅಲ್ಲಿನ ಕಲಾವಿದರಿಗೆ ಗಿಫ್ಟ್ ಸಹ ಕಲಿಸಿಕೊಡುತ್ತಾರೆ. ಆದರೆ ಕನ್ನಡ ಚಿತ್ರರಂಗ ಮತ್ತು ಇಲ್ಲಿನ ಕಲಾವಿದರೆಂದರೆ ರಶ್ಮಿಕಾರಿಗೆ ತಾತ್ಸಾರ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಕನ್ನಡ ಚಿತ್ರರಂಗದ ಒಬ್ಬ ಕಲಾವಿದರ ಹುಟ್ಟುಹಬ್ಬಕ್ಕೂ ಸಹ ರಶ್ಮಿಕಾ ವಿಶ್ ಮಾಡಿಲ್ಲ. ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಗಳು ಮತ್ತು ಟ್ವೀಟ್ ಗಳನ್ನು ನೋಡಿದರೆ ಇದು ತಿಳಿದುಬರುತ್ತದೆ. ತಾವೇ ನಟಿಸಿರುವ ಕನ್ನಡ ಸಿನಿಮಾ ಬಗ್ಗೆ ಸಹ ಒಂದು ಪೋಸ್ಟ್ ಮಾಡಿಲ್ಲ, ಕನ್ನಡ ಎಂದರೆ ಈ ನಟಿಗೆ ಏಕಿಷ್ಟು ತಾತ್ಸಾರ ಎಂದು ಹಲವರಲ್ಲಿ ಪ್ರಶ್ನೆ ಮೂಡಿದೆ.

ಪೊಗರು ಪ್ರೊಮೋಷನ್ ಕುರಿತು ನಿರ್ದೇಶಕರನ್ನು ಕೇಳಿದರೆ, ರಶ್ಮಿಕಾ ಅವರು ಪೊಗರು ಸಿನಿಮಾ ಪ್ರೊಮೋಷನ್ ಗಾಗಿಯೇ ಒಂದು ತಿಂಗಳು ಮೀಸಲಿಟ್ಟಿದ್ದಾರೆ. ಆ ಸಮಯದಲ್ಲಿ ಮಾತ್ರ ಪ್ರಚಾರಕ್ಕೆ ಬರುತ್ತಾರೆ, ಆದರೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದು ಅವರ ವೈಯಕ್ತಿಕ ವಿಷಯ ಸಿನಿಮಾ ಮೇಲೆ ಪ್ರೀತಿ ಇದ್ದರೆ ಹಂಚಿಕೊಳ್ಳುತ್ತಾರೆ ಎಂದಿದ್ದಾರೆ ನಿರ್ದೇಶಕ ನಂದಕಿಶೋರ್. ಅದೇನೇ ಆದರೂ, ತೆಲುಗು ಚಿತ್ರರಂಗದ ಬಗ್ಗೆ ರಶ್ಮಿಕಾರಿಗೆ ಇರುವ ಪ್ರೀತಿ, ಕನ್ನಡ ಚಿತ್ರರಂಗ ಬಗ್ಗೆ ಇಲ್ಲ ಎಂಬ ಮಾತುಗಳು ನಿಜವೇ ಎನ್ನುವಂತೆ ತೋರುತ್ತಿದೆ.

Trending

To Top