ಚೆನೈ: ಇತ್ತೀಚಿಗಷ್ಟೆ ತಮ್ಮ ರಾಜಕೀಯ ಪ್ರವೇಶದ ಕುರಿತು ಘೋಷಿಸಿರುವ ಸೂಪರ್ ಸ್ಟಾರ್ ರಜನಿಕಾಂತ್ ರವರು, ಡಿ.೩೧ ರಂದು ತಮ್ಮ ಪಕ್ಷದ ಹೆಸರು ಹಾಗೂ ಚಿಹ್ನೆ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಆದರೆ ರಜನಿಕಾಂತ್ ಘೋಷಣೆ ಮಾಡುವುದಕ್ಕೂ ಮುನ್ನವೇ ಕೆಲವೊಂದು ತಮಿಳು ಚಾನಲ್ ಗಳು ಬಹಿರಂಗಪಡಿಸಿದೆ ಎಂದು ತಿಳಿದುಬಂದಿದೆ.
ರಜನಿಕಾಂತ್ ರವರು ತಮ್ಮ ಪಕ್ಷದ ಹೆಸರನ್ನು ಮಕ್ಕಳ್ ಸೇವೈ ಕಚ್ಚಿ ಎಂದು ಚುನಾವಣಾ ಆಯೋಗದಲ್ಲಿ ನೊಂದಣಿ ಮಾಡಿಸಿದ್ದಾರೆ. ಇನ್ನೂ ಪಕ್ಷದ ಚಿಹ್ನೆಯಾಗಿ ಆಟೋ ರಿಕ್ಷಾವನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ. ಇನ್ನೂ ಮಕ್ಕಳ್ ಸೇವೈ ಕಚ್ಚಿ ಎಂದರೇ ಜನರಿಗೆ ಸೇವೆ ಮಾಡುವ ಪಕ್ಷ ಎಂಬ ಅರ್ಥ.
ಇನ್ನೂ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಡಿಸೆಂಬರ್ ೩೧ ರಂದು ಘೋಷಿಸಲಾಗುತ್ತದೆ. ರಜನಿ ಮೊದಲು ಪಕ್ಷದ ಹೆಸರನ್ನು ಮಕ್ಕಳ್ ಶಕ್ತಿ ಕಳಗಂ ಎಂದು ನೊಂದಾಯಿಸಿದ್ದು, ಬಾಬಾ ಚಿಹ್ನೆಯನ್ನು ಕೇಳಿದ್ದರು ಎನ್ನಲಾಗಿದೆ. ಆದರೆ ಇದು ಸಾಧ್ಯವಿಲ್ಲದ ಕಾರಣ ನೂತನ ಪಕ್ಷ ಹಾಗೂ ಹೊಸ ಚಿಹ್ನೆಯನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ರಜನಿಕಾಂತ್ ರಾಜಕೀಯ ಪ್ರವೇಶದಿಂದ ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಉಂಟು ಮಾಡಿದ್ದು, ಬಿಜೆಪಿಯ ಮಿತ್ರ ಪಕ್ಷ ಆಗುವ ಸೂಚನೆಗಳು ಕಾಣುತ್ತಿವೆಯಂತೆ. ಅಷ್ಟೇಅಲ್ಲದೇ ಡಿಎಂಕೆ ಪಕ್ಷಕ್ಕೆ ಹಿನ್ನೆಡೆಯಾಗುವ ಸಾಧ್ಯತೆ ಸಹ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.
ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ ೨೦೨೧ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು, ಈ ಚುನಾವಣೆಯಲ್ಲಿ ರಜನಿಕಾಂತ್ ಪಕ್ಷ ಹಾಗೂ ಕಮಲ್ ಹಾಸನ್ ಪಕ್ಷ ಸ್ಪರ್ಧಿಸಲಿದ್ದು, ಈ ಬಾರಿ ಸ್ಟಾರ್ ನಟರ ಹವಾ ಹೆಚ್ಚಾಗಲಿದೆ ಎನ್ನಲಾಗಿದೆ.
