Cinema

ಮಾಸ್ಕ್ ಧರಿಸಿದ ರಾಧೆ ಶ್ಯಾಮ್ – ಪ್ರಭಾಸ್ ಪೂಜಾ ಪೋಸ್ಟರ್ ಎಲ್ಲೆಲ್ಲೂ ಹವಾ!

ಪ್ರಪಂಚದಲ್ಲಿ ಸಿನಿಮಾ ಎನ್ನುವುದು ಒಂದು ಬಹಳ ವಿಶೇಷವಾದ ಮಾಧ್ಯಮ. ಒಂದು ಒಳ್ಳೆಯ ಕಥೆ ಹಾಗೂ ಸಿನಿಮಾ ಮೂಲಕ ಒಬ್ಬ ವ್ಯಕ್ತಿಯ ಜೀವನವನ್ನೇ ಬದಲಾಯಿಸಬಹುದು. ಒಂದು ಒಳ್ಳೆಯ ಕಥಾಪಾತ್ರ ಹಲವಾರು ಜನರ ಮೇಲೆ ಸಕಾರಾತ್ಮಕ ಪ್ರಭಾವ ಬೀರಬಹುದು. ಅದೇ ರೀತಿ ಒಂದು ಕೆಟ್ಟ ಪಾತ್ರ ಅಥವಾ ಕೆಟ್ಟ ಕಥೆಯು ಕೂಡ ನೋಡುಗರ ಮೇಲೆ ನೆಗಟಿವ್ ಪ್ರಭಾವವನ್ನು ಬೀರಬಹುದು. ಬಂಗಾರದ ಮನುಷ್ಯ ಸಿನಿಮಾ ನೋಡಿ ಅಣ್ಣಾವ್ರ ಹಾಗೆ ಹಲವಾರು ಜನ ಕೃಷಿ ಶುರು ಮಾಡಿದರು ಎಂದು ನಾವು ಕೇಳಿದ್ದೇವೆ. ಈ ಬಂಧನ ಸಿನಿಮಾ ನೋಡಿ, ಎಲ್ಲರೂ ತಮ್ಮ ಪತ್ನಿಯರಿಗೆ ಐ ಲವ್ ಯೂ ಎಂದು ಹೇಳುತ್ತಿದ್ದರು ಎಂಬುದನ್ನು ಕೇಳಿದ್ದೇವೆ.. ಒಂದು ಸಿನಿಮಾ ಅದರಲ್ಲಿ ಬರುವ ಒಳ್ಳೆಯ ಘಟನೆ ಒಬ್ಬ ಮನುಷ್ಯನ ಮೇಲೆ ಎಷ್ಟೆಲ್ಲ ಪರಿಣಾಮ ಬೀರುತ್ತದೆ ಎಂಬುದಕ್ಕೆ ಈ ಉದಾಹರಣೆಗಳು ಸಾಕ್ಷಿ. .
ಇದೀಗ ಈ ಕರೊನಾ ಆತಂಕಕಾರಿ ಸಮಯದಲ್ಲೂ ಸಿನಿಮಾಗಳು ಉಪಯೋಗಕ್ಕೆ ಬರುತ್ತಿವೆ. ಹೇಗೆ ಅಂತೀರಾ… ಸಿನಿಮಾ ಡೈಲಾಗ್ ಗಳು , ಹಾಡಿನ ಸಾಲು ಹಾಗೂ ಪೋಸ್ಟರ್ ಬಳಸಿ ನಮ್ಮ ದೇಶದ ಪೊಲೀಸ್ ಅಧಿಕಾರಿಗಳು ಕರೊನಾ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಲವಾರು ಮೀಮ್ಸ್ ಗಳು ಹಾಗೂ ಫೋಟೋಷಾಪ್ ಮೂಲಕ ಎಡಿಟ್ ಮಾಡಿ ಕರೊನಾ ಜಾಗೃತಿ ಮೂಡಿಸುತ್ತಿದ್ದರೆ. ಈ ಹಿಂದೆ ಟಗರು, ಪೈಲ್ವಾನ್, ಬುದ್ಧಿವಂತ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳ ಡೈಲಾಗ್ ಗಳು ಹಾಗೂ ಪೋಸ್ಟರ್ ಗಳನ್ನು ಬಳಸಿ ಕರೊನಾ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಕೆಲ ದಿನಗಳ ಹಿಂದೆ ಕಾಲಿವುಡ್ ನ ಬಹುಯಶಸ್ವಿ ಸಿನಿಮಾ ಬಾಹುಬಲಿ ಪೋಸ್ಟರ್ ನಲ್ಲಿ ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿ ಅವರ ಮುಖಕ್ಕೆ ಮಾಸ್ಕ್ ಹಾಕಿರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ನಿರ್ದೇಶಕ ಎಸ್.ಎಸ್.ರಾಜಮೌಳಿ.
ಈ ಪೋಸ್ಟರ್ ಬಹಳ ವೈರಲ್ ಆಗಿತ್ತು. ಇದೀಗ ಮತ್ತೊಂದು ಪೋಸ್ಟರ್ ಇದೇ ರೀತಿ ಸೌಂಡ್ ಮಾಡುತ್ತಿದೆ. ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಬಹುಭಾಷಾ ನಟಿ ಕನ್ನಡತಿ ಪೂಜಾ ಹೆಗ್ಡೆ ನಟಿಸುತ್ತಿರುವ ಸಿನಿಮಾದ ಹೆಸರು ಹಾಗೂ ಫಸ್ಟ್ ಲುಕ್ ಪೋಸ್ಟರ್ ಜುಲೈ 10ರಂದು ಬಿಡುಗಡೆಯಾಯಿತು. ಈ ಸಿನಿಮಾದ ಟೈಟಲ್ ರಾಧೆ ಶ್ಯಾಮ್.ರಾಧೆ ಶ್ಯಾಮ್ ನಲ್ಲಿ ಪಕ್ಕಾ ಲವರ್ ಬಾಯ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ ಪ್ರಭಾಸ್. ರಾಧೆ ಶ್ಯಾಮ್ ಫಸ್ಟ್ ಲುಕ್ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿತ್ತು. ಅತೀ ಕಡಿಮೆ ಸಮಯದಲ್ಲಿ 3.8ಮಿಲಿಯನ್ ಟ್ವೀಟ್ ಆಗುವುದರ ಮೂಲಕ ದಾಖಲೆ ಬರೆದಿತ್ತು. ಇದೀಗ ರಾಧೆ ಶ್ಯಾಮ್ ಪೋಸ್ಟರ್ ಬಳಸಿ ಕರೊನಾ ಜಾಗೃತಿ ಮೂಡಿಸುತ್ತಿದ್ದಾರೆ ಅಸ್ಸಾಂ ಪೊಲೀಸರು.
ಪೋಸ್ಟರ್ ನಲ್ಲಿ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅವರ ಮುಖಕ್ಕೆ ಮಾಸ್ಕ್ ಹಾಕಿ”ನಿಮ್ಮ ಪ್ರೀತಿ ಪಾತ್ರರು ಮನೆಯಿಂದ ಹೊರಗೆ ಹೋಗುವಾಗ ಮಾಸ್ಕ್ ಧರಿಸಲು ಹೇಳಿ.. ಪ್ರಭಾಸ್ ಅವರಿಗೆ ಕರೆಮಾಡಲು ಪ್ರಯತ್ನ ಪಟ್ಟೆವು ಆದರೆ ಆಗಲಿಲ್ಲ.. ಹಾಗಾಗಿ ಈ ಸಂದೇಶವನ್ನು ಫೋಟೋಷಾಪ್ ಮೂಲಕ ಕಳಿಸುತ್ತಿದ್ದೇವೆ..” ಎಂದು ಅಸ್ಸಾಂ ಪೊಲೀಸರು ಟ್ವೀಟ್ ಮಾಡಿದ್ದಾರೆ. ಸಿನಿಮಾಗಳು ಎಲ್ಲಾ ಸಮಯದಲ್ಲೂ ಎಲ್ಲಾ ರೀತಿಯಲ್ಲೂ ಉಪಯೋಗಕ್ಕೆ ಬರುತ್ತದೆ ಎಂಬುದು ಸಂತಸದ ಸಂಗತಿ. ಇನ್ನಾದರೂ ನಮ್ಮ ಜನ ಕರೊನಾ ಸೋಂಕು ಎಷ್ಟು ಅಪಾಯಕಾರಿ ಎಂಬುದನ್ನು ಅರ್ಥಮಾಡಿಕೊಂಡು ಜಾಗ್ರತೆಯಿಂದ ಇರುವುದು ಒಳ್ಳೆಯದು.

Trending

To Top