Film News

ಹೊಸ ಸಿನಿಮಾದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ನಟಿಸಲಿದ್ದಾರೆ ಪ್ರಜ್ವಲ್ ದೇವರಾಜ್

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರು ಪ್ರಜ್ವಲ್ ದೇವರಾಜ್. ಹಿರಿಯ ನಟ ದೇವರಾಜ್ ಅವರ ಮಗ. ಬಹಳ ಬೇಗ ಚಿತ್ರರಂಗಕ್ಕೆ ನಟನಾಗಿ ಎಂಟ್ರಿ ಕೊಟ್ಟು, ಇಂದಿನವರೆಗೂ ಸುಮಾರು 30 ಸಿನಿಮಾಗಳಲ್ಲಿ ನಟಿಸಿದ್ದಾರೆ ಪ್ರಜ್ವಲ್. ಯಾವುದೇ ಪಾತ್ರವಾದರೂ ನಿರರ್ಗಳವಾಗಿ ನಿರ್ವಹಿಸಬಲ್ಲ ನಟರಲ್ಲಿ ಒಬ್ಬರು ಪ್ರಜ್ವಲ್.

ಕಾಲೇಜು ಹುಡುಗನ ಪಾತ್ರ, ಸ್ಟೈಲಿಶ್ ಪಾತ್ರ, ಮಾಸ್ ಪಾತ್ರ, ಡೀಸೆಂಟ್ ಪಾತ್ರ ಎಂತಹ ಪಾತ್ರವೇ ಆದರೂ ಸೂಟ್ ಆಗುವ ನಟ ಪ್ರಜ್ವಲ್. ಇದುವರೆಗೆ ಅವರು ನಟಿಸಿರುವ ಪಾತ್ರಗಳು ಸಹ ಒಂದಕ್ಕಿಂತ ಒಂದು ಭಿನ್ನವಾದವು. ಇತ್ತೀಚೆಗೆ ಇನ್ಸ್ಪೆಕ್ಟರ್ ವಿಕ್ರಂ, ಜಂಟಲ್ ಮನ್ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ವೀರಂ, ಅರ್ಜುನ್ ಗೌಡ ಹಾಗೂ ಇನ್ನಿತರ 5 ಸಿನಿಮಾಗಳಲ್ಲಿ ಪ್ರಜ್ವಲ್ ನಟಿಸುತ್ತಿದ್ದು, ಇದೀಗ ಪ್ರಜ್ವಲ್ ಮತ್ತೊಂದು ಸಿನಿಮಾದಲ್ಲಿ ನಟಿಸುವುದು ಖಚಿತವಾಗಿದೆ.

ಹೊಸ ಸಿನಿಮಾದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ನಟಿಸಲಿದ್ದಾರೆ ಪ್ರಜ್ವಲ್. ಈ ಸಿನಿಮಾವನ್ನು ಅರ್ಜುನ ಸಿನಿಮಾ ನಿರ್ದೇಶನ ಮಾಡಿದ್ದ ಪಿ.ಸಿ.ಶೇಖರ್ ನಿರ್ದೇಶಿಸಲಿದ್ದಾರೆ. ಅರ್ಜುನ ಸಿನಿಮಾದಲ್ಲಿ ಪ್ರಜ್ವಲ್ ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದರು, ಹೊಸ ಸಿನಿಮಾದಲ್ಲಿನ ಪಾತ್ರ ಕೂಡ ವಿಭಿನ್ನವಾಗಿ ಇರಲಿದೆಯಂತೆ. ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಪ್ರಜ್ವಲ್.

ಈ ಸಿನಿಮಾ ಬಹಳ ರಿಯಲಿಸ್ಟಿಕ್ ಆಗಿ ಮೂಡಿಬರಲಿದ್ದು, ಕ್ಯಾಂಡಿಡ್ ಆಗಿ ಚಿತ್ರೀಕರಣ ನಡೆಯಲಿದೆಯಂತೆ. ಪ್ರೇಕ್ಷಕರಿಗೆ ತಮ್ಮ ಮುಂದೆಯೇ ಈ ಕಥೆ ನಡೆಯುತ್ತಿದೆ ಎಂದು ಅನ್ನಿಸುತ್ತದೆ ಎಂದಿದ್ದಾರೆ ನಿರ್ದೇಶಕರು. ಇನ್ನು ಈ ಹೊಸ ಸಿನಿಮಾಗೆ ಅರ್ಜುನ್ ಜನ್ಯಾ ಮ್ಯೂಸಿಕ್ ನೀಡಲಿದ್ದಾರೆ. ಇನ್ನುಳಿದ ಪಾತ್ರಗಳು ಮತ್ತು ತಾಂತ್ರಿಕ ವರ್ಗಗಳ ಆಯ್ಕೆ ನಡೆಯಬೇಕಿದೆ.

Trending

To Top