ಬೆಂಗಳೂರು: ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ದೂರಿ ಸೆಟ್ನೊಂದಿಗೆ ಚಿತ್ರೀಕರಣ ನಡೆದ ಫ್ಯಾಂಟಮ್ ಚಲನಚಿತ್ರದ ಕೊನೆಯ ಹಂತದ ಶೂಟಿಂಗ್ ಅನ್ನು ಕೇರಳದಲ್ಲಿ ಮಾಡುವುದಕ್ಕೆ ಪ್ಲಾನ್ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಚಲನಚಿತ್ರ ತೆರೆಗೆ ಬರಲಿದೆ.
ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಖ್ಯಾತಿ ಅನೂಪ್ ಭಂಡಾರಿ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಫ್ಯಾಂಟಮ್ ಚಿತ್ರದ ಶೂಟಿಂಗ್ ಕೆಲಸ ಡಿಸೆಂಬರ್ ಮೊದಲ ವಾರದಿಂದ ಕೇರಳದಲ್ಲಿ ನಡೆಯಲಿದೆ. ನಂತರ ಬೆಂಗಳೂರಿನಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಸಿನಿಮಾಕ್ಕೆ ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದು, ಸಂಗೀತ ನಿರ್ದೇಶನವನ್ನು ಅಂಜನೀಶ್ ಲೋಕನಾಥ್ ಮಾಡುತ್ತಿದ್ದಾರೆ. ಮುಖ್ಯವಾಗಿ ನಿರೂಫ್ ಭಂಡಾರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಫ್ಯಾಂಟಮ್ ಚಿತ್ರವನ್ನು ಮತಷ್ಟು ಮೆರಗುಗೊಳಿಸಲು ಬಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಖ್ಯಾತಿ ಪಡೆದಿರುವ ಕತ್ರಿನಾ ಕೈಫ್ ಚಿತ್ರದ ಹಾಡೊಂದರಲ್ಲಿ ಕುಣಿಯುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇನ್ನೂ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ಪೈಲ್ವಾನ್, ಕೋಟಿಗೊಬ್ಬ-೨ ಚಿತ್ರಗಳು ಸಹ ಏಕಕಾಲದಲ್ಲಿ ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.
