ಅಭಿನಯ ಚಕ್ರವರ್ತಿ ಬಾದ್ ಶಾ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ “ಫ್ಯಾಂಟಮ್”. ಪ್ರತಿದಿನ ಹಲವಾರು ವಿಶೇಷತೆಗಳನ್ನು ಹೊರತರುತ್ತಿದೆ ಈ ಸಿನಿಮಾ ತಂಡ.ಎರಡು ವಾರದ ಹಿಂದೆ ಕಿಚ್ಚ ಸುದೀಪ್ ನಟಿಸುತ್ತಿರುವ ವಿಕ್ರಾಂತ್ ರೋಣ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಕಳೆದ ವಾರ ಫ್ಯಾಂಟಮ್ ಸಿನಿಮಾದ ಮತ್ತೊಬ್ಬ ಮುಖ್ಯಪಾತ್ರಧಾರಿ ನಿರೂಪ್ ಭಂಡಾರಿ ಅವರ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿ ನಿರೂಪ್ ಅಭಿಮಾನಿಗಳಿಗೆ ಸಂತಸ ನೀಡಿತ್ತು. ಇದೀಗ ಫ್ಯಾಂಟಮ್ ಸಿನಿಮಾದ ಮತ್ತೊಂದು ಸುಂದರವಾದ ಪಾತ್ರ ಅಪರ್ಣ ಬಲ್ಲಾಳ್ ಅಲಿಯಾಸ್ ಪನ್ನ, ಈ ಪಾತ್ರದ ಪರಿಚಯವಾಗಿದೆ. ಈ ಪಾತ್ರವನ್ನು ಕಿರುತೆರೆ ಕಲಾವಿದೆ ನೀತು ಅಶೋಕ್ ನಿರ್ವಹಿಸುತ್ತಿದ್ದಾರೆ.
ಪನ್ನ ಪಾತ್ರದ ಕುರಿತು ಮಾಹಿತಿ ನೀಡಿರುವ ನಿರ್ದೇಶಕರು, ಫ್ಯಾಂಟಮ್ ಚಿತ್ರದ ಮತ್ತೊಂದು ಸುಂದರವಾದ ಪಾತ್ರ ಅಪರ್ಣ ಬಲ್ಲಾಳ್ ಅಲಿಯಾಸ್ ಪನ್ನ, ಮುಂಬೈ ನಲ್ಲಿ ಹುಟ್ಟಿ ಬೆಳೆದಿರುವ ಹುಡುಗಿ ಹಾಗಾಗಿ ಆಕೆಗೆ ಹಿಂದಿ ಮಿಶ್ರಿತ ಕನ್ನಡ ಬರುತ್ತದೆ. ಪನ್ನ ತುಂಬಾ ಅಡ್ವೆಂಚರಸ್ ಹುಡುಗಿ, ಎಲ್ಲವನ್ನು ತಿಳಿದುಕೊಳ್ಳಬೇಕು ಎಂಬ ಆಸೆ ಅವಳದ್ದು. ಈ ಪಾತ್ರವನ್ನು ನೀತು ಅಶೋಕ್ ನಿರ್ವಹಿಸುತ್ತಿದ್ದಾರೆ. ಇದು ಅವರಿಗೆ ಮೊದಲ ಸಿನಿಮಾ ಎಂದು ಹೇಳಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.
ನಟಿ ನೀತು ಅಶೋಕ್, ಯಶೋಧೆ, ನಾ ನಿನ್ನ ಬಿಡಲಾರೆ ಮತ್ತು ನೀಲಾಂಬರಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಜೊತೆಗೆ ಕೆಲವು ರಿಯಾಲಿಟಿ ಶೋಗಳಲ್ಲಿ ಸಹ ಸ್ಪರ್ಧಿಸಿದ್ದರು. ನೀತು ಅವರಿಗೆ ಇದು ಮೊದಲ ಸಿನಿಮಾ, ಮೊದಲ ಸಿನಿಮಾದಲ್ಲಿ ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ ಅವರಂತಹ ಪ್ರತಿಭಾನ್ವಿತರ ಜೊತೆಯಲ್ಲಿ ಕೆಲಸ ಮಾಡುವ ಅವಕಾಶ ಈ ಕಲಾವಿದೆಗೆ ಸಿಕ್ಕಿದೆ. ಬೆಳ್ಳಿತೆರೆಗೆ ನೀತು ಎಂಟ್ರಿ ಕೊಡುತ್ತಿರುವ ವಿಷಯವಾಗಿ ಅವರ ಸಹೋದ್ಯೋಗಿಗಳು ಪ್ರಶಂಸೆ ಮತ್ತು ಪ್ರೋತ್ಸಾಹ ನೀಡುತ್ತಿದ್ದಾರೆ. ನಟನೆಯ ಜೊತೆಗೆ ನೀತು ಅವರಿಗೆ ಪೇಂಟಿಂಗ್ ಎಂದರೆ ಬಹಳ ಇಷ್ಟ ಅಂತೆ. ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸಕ್ರಿಯರಾಗಿರುವ ನೀತು, ಹಲವಾರು ಫೋಟೋಗಳನ್ನು ಶೇರ್ ಮಾಡುತ್ತಾರೆ.
