ಚೆನೈ: ತಮಿಳು ದಳಪತಿ ವಿಜಯ್ ಅಭಿನಯದ ಮಾಸ್ಟರ್ ಚಿತ್ರ ಇನ್ನೇನೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಜ.13 ರಂದು ತೆರೆಗೆ ಬರಲಿದ್ದು, ಚಿತ್ರದ ಟಿಕೆಟ್ ಗಾಗಿ ಅಭಿಮಾನಿಗಳು ತಮಿಳುನಾಡಿನ ಮಲ್ಟಿಫ್ಲೆಕ್ಸ್ ಚಿತ್ರ ಮಂದಿರಗಳ ಬಳಿ ಕ್ಯೂ ನಿಂತಿದ್ದಾರೆ.
ಕೊರೋನಾ ಭಯವಿಲ್ಲದೇ ಮಾಸ್ಟರ್ ಚಿತ್ರವನ್ನು ವೀಕ್ಷಿಸಲು ಕ್ಯೂ ನಿಂತು ಟಿಕೆಟ್ ಗಾಗಿ ಕಾಯುತ್ತಿದ್ದಾರೆ. ಕೊರೋನಾ ಹಿನ್ನಲೆಯಲ್ಲಿ ಚಿತ್ರಮಂದಿರಗಳಲ್ಲಿ ಶೇ.೫೦ ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ತಮಿಳುನಾಡು ಸರ್ಕಾರ ಪೂರ್ಣ ಪ್ರಮಾಣದ ಆಸನಗಳ ಭರ್ತಿಗೆ ಅವಕಾಶ ನೀಡಿ, ಕೇಂದ್ರ ಸರ್ಕಾರ ಆಕ್ಷೇಪಿಸಿದ ಬಳಿಕ ಈ ಅವಕಾಶ ವಾಪಸ್ಸು ಪಡೆದಿತ್ತು. ಇದೀಗ ಚಿತ್ರದ ಬಿಡುಗಡೆಗೆ ಎಲ್ಲ ಸಿದ್ದತೆಗಳು ನಡೆದಿದ್ದು, ಮುಂಗಡ ಟಕೆಟ್ ಗಾಗಿ ಜನರು ಮುಗಿಬಿದ್ದಿದ್ದಾರೆ. ತಮಿಳು ಸೇರಿದಂತೆ ಕನ್ನಡ, ಹಿಂದಿ, ತೆಲುಗು ಭಾಷೆಯಲ್ಲೂ ಮಾಸ್ಟರ್ ಸಿನೆಮಾ ತೆರೆಗೆ ಬರಲಿದೆ. ತಮಿಳು, ಆಂಧ್ರ, ತೆಲಂಗಾಣ, ಕರ್ನಾಟಕದಲ್ಲೂ ಮಾಸ್ಟರ್ ಚಿತ್ರ ರಿಲೀಸ್ ಆಗಲಿದೆ.
ಅನೇಕ ತಡೆಗಳ ನಡುವೆ ಬಿಗ್ ಬಜೆಟ್ ಚಿತ್ರವಾದ ಮಾಸ್ಟರ್ ಚಿತ್ರಮಂದಿರಗಳಲ್ಲಿ ತೆರೆಗೆ ಬರುವುದಕ್ಕೂ ಮೊದಲೇ ಸಿನೆಮಾಗೆ ಹ್ಯಾಕರ್ಸಗಳ ಕಾಟ ಶುರುವಾಗಿದೆ. ಸಿನೆಮಾ ಬಿಡುಗಡೆಗೂ ಮೊದಲೇ ಲೀಕ್ ಆಗಿರುವ ಮಾಸ್ಟರ್ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರದ ಇಂಟ್ರಡಕ್ಷನ್ ಸನ್ನಿವೇಶಗಳು ಸೇರಿದಂತೆ ಪ್ರಮುಖ ದೃಶ್ಯಗಳು ಲೀಕ್ ಆಗಿವೆ. ಇದರಿಂದ ಚಿತ್ರತಂಡ ಬೇಸರ ವ್ಯಕ್ತಪಡಿಸಿದೆ. ಇನ್ನೂ ವಿಡಿಯೋ ಶೇರ್ ಮಾಡದಂತೆ ಚಿತ್ರತಂಡ ಮನವಿ ಮಾಡಿದೆ. ಸೋರಿಕೆಯಾದ ಕ್ಲಿಪ್‌ಗಳನ್ನು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೂ ಶೇರ್ ಮಾಡದಂತೆ ಹಾಗೂ ಸಿನೆಮಾ ಲೀಕ್ ಆದ ಸೈಟ್ ಗಳನ್ನು ರಿಪೋರ್ಟ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
