ಕಿರುತೆರೆಯ ಎಕ್ಸ್ಪರ್ಟ್ ಟಿ.ಎನ್. ಸೀತಾರಾಮ್ ಅವರ ನಿರ್ದೇಶನದ ಮಾಸ್ಟರ್ ಪೀಸ್ ಧಾರಾವಾಹಿ “ಮಾಯಾಮೃಗ”, ಈ ಧಾರಾವಾಹಿಯನ್ನು ದಶಕಗಳ ಹಿಂದೆ ಟಿ.ಎನ್. ಎಸ್ ಅವರು ನಿರ್ದೇಶನ ಮಾಡಿದ್ದರು. ಮಾಯಾಮೃಗದ ಮೂಲಕ ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಗೆ ಅನೇಕ ಕಲಾವಿದರ ದಂಡೇ ಸಿಕ್ಕಿತ್ತು. 1998ರಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು ಮಾಯಾಮೃಗ.ಇಂದಿಗೂ ಸಹ ಮಾಯಾಮೃಗ ಧಾರಾವಾಹಿಯನ್ನು ಜನರು ಅಷ್ಟೇ ಇಷ್ಟ ಪಡುತ್ತಾರೆ. ಈ ಧಾರಾವಾಹಿಯ ಶೀರ್ಷಿಕೆ ಗೀತೆ.ಮಾಯಾಮೃಗ ಮಾಯಾಮೃಗ ಮಾಯಾಮೃಗವೆಲ್ಲಿ… ಹಾಡನ್ನು ಕೇಳಿದರೆ ಇಂದಿಗೂ ರೋಮಾಂಚನವಾಗಲಿದೆ. ಸಿ ಅಶ್ವಥ್ ಅವರ ಸಂಗೀತ, ಮಂಜುಳಾ ಗುರುರಾಜ್ , ಅರ್ಚನಾ ಉಡುಪ ಮತ್ತು ಎಂ.ಡಿ.ಪಲ್ಲವಿ ಅವರ ಗಾಯನ ಅದ್ಭುತ. ಇಂದಿಗೂ ಕಿರುತೆರೆ ಸಿನಿಪ್ರಿಯರು ಈ ಧಾರಾವಾಹಿಯನ್ನು ನೆನಪಿಸಿಕೊಳ್ಳುತ್ತಾರೆ.
ಇದೀಗ, ಈ ಧಾರಾವಾಹಿ ಮತ್ತೊಮ್ಮೆ ಪ್ರಸಾರವಾಗುವ ಲಕ್ಷಣಗಳಿವೆ. ಈ ಕುರಿತು ನಿರ್ದೇಶಕರಾದ ಟಿ.ಎನ್.ಸೀತಾರಾಮ್ ಅವರು ಖುದ್ದಾಗಿ ಮಾಹಿತಿ ನೀಡಿದ್ದಾರೆ. ಫೇಸ್ ಬುಕ್ ಪೋಸ್ಟ್ ಮಾಡಿರುವ ಸೀತಾರಾಮ್ ಅವರು, “ಮಾಯಾಮೃಗ ಧಾರಾವಾಹಿ ಮೊದಲಿನಿಂದ ಕಡೆಯವರೆಗೆ ಮತ್ತೊಮ್ಮೆ ಪ್ರಸಾರವಾಗುವ ಸಾಧ್ಯತೆ ಇದೆ. ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ನೋಡುವುದಾದರೆ ಮಾತ್ರ…” ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಬಹಳ ಖುಷಿಯಿಂದ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ತಾವೆಲ್ಲರೂ ಬಹಳ ಖುಷಿಯಿಂದ ಧಾರಾವಾಹಿಯನ್ನು ನೋಡುವುದಾಗಿ ತಿಳಿಸಿ ಜೊತೆಗೆ ಯಾವ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ಸೀತಾರಾಮ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಆದರೆ ಸೀತಾರಾಮ್ ಅವರು ಯಾವ ವಾಹಿನಿಯಲ್ಲಿ ಎಂಬುದಕ್ಕೆ ಉತ್ತರ ನೀಡಿಲ್ಲ.
ಮಾತುಕತೆ ನಡೆಯುತ್ತಿದ್ದು, ಒಂದು ವಾರದಲ್ಲಿ ಅಂತಿಮವಾಗಲಿದೆ ಎಂದಿದ್ದಾರೆ. ಮಾಯಾಮೃಗ ಧಾರಾವಾಹಿ 1998 ದೂರದರ್ಶನದಲ್ಲಿ ಮೊದಲ ಬಾರಿಗೆ ಪ್ರಸಾರವಾಗಿತ್ತು, ನಂತರ 2014 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿತ್ತು, ಆದರೆ 2014 ರಲ್ಲಿ ಎಲ್ಲಾ ಸಂಚಿಕೆಗಳು ಪ್ರಸಾರವಾಗಿರಲಿಲ್ಲ. ಇದೀಗ ಸೀತಾರಾಮ್ ಆವರು ನೀಡಿರುವ ಈ ಸುದ್ದಿ ಎಲ್ಲಾ ಕಿರುತೆರೆ ಅಭಿಮಾನಿಗಳಿಗೂ ಸಂತಸ ತಂದಿದೆ.
