Karnataka

ಮಂಗಳೂರಿನಲ್ಲಿ ಊದಿನ ಕಡ್ಡಿಯಿಂದ ರಾಮ ಮಂದಿರ ನಿರ್ಮಾಣ! ನೋಡೋಕೆ ಎರಡು ಕಣ್ಣು ಸಾಲದು

ನಿನ್ನೆ ಆಗಸ್ಟ್ 5, ಭಾರತದ ಇತಿಹಾಸದಲ್ಲೇ ಮರೆಯಲಾಗದ ದಿನ. 138 ವರ್ಷಗಳ ಹೋರಾಟದ ನಂತರ ಕೊನೆಗೂ, ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನ ನಿರ್ಮಿಸಲು ಅನುಮತಿ ಸಿಕ್ಕಿ, ನಿನ್ನೆ ಭೂಮಿ ಪೂಜೆ ನೆರವೇರಿದೆ. ಇದು ಭಾರತಿಯರೆಲ್ಲರಿಗೂ ಬಹಳ ಸಂಭ್ರಮದ ದಿನ. ಭಾರತದ ಎಲ್ಲೆಡೆ, ಸಾರ್ವಜನಿಕರು ಈ ದಿನವನ್ನು ಸಂಭ್ರಮಿಸಿದ್ದಾರೆ. ಸಿಹಿ ಹಂಚಿ, ಪಟಾಕಿ ಸಿಡಿಸಿ, ದೀಪ ಹಚ್ಚಿ ಸಂತೋಷ ವ್ಯಕ್ತ ಪಡಿಸಿದ್ದಾರೆ. ಇದೆಲ್ಲದರ ನಡುವೆ ನಮ್ಮ ಕರ್ನಾಟಕದ ಪ್ರತಿಭೆಯೊಬ್ಬರು ವಿಭಿನ್ನ ರೀತಿಯಲ್ಲಿ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.
ಅದು ಹೇಗೆ ಅಂದ್ರೆ.. ಊದು ಬತ್ತಿಯು ಉರಿದು ನಂತರ ಉಳಿಯುವ ತುಂಡುಗಳಿಂದ ತಮ್ಮ ಊಹೆಯ ರಾಮಮಂದಿರವನ್ನು ನಿರ್ಮಿಸಿ, ನೋಡುಗರಲ್ಲಿ ಆಶ್ಚರ್ಯ ತರಿಸಿದ್ದಾರೆ. ರಾಮಮಂದಿರ ನಿರ್ಮಿಸಲು ಸರ್ಕಾರ ಅನುಮತಿ ನೀಡಿದ ದಿನದಿಂದ ಗಡಿನಾಡು ಕಾಸರಗೋಡಿನ ಮಂಜೇಶ್ವರದ ಕಡಂಬಾರ್ ಚೆಂಬಪದವು ನಿವಾಸಿ ಮೌನೇಶ್ ಆಚಾರ್ಯ ಅವರು ಊದುಬತ್ತಿಯಲ್ಲಿ ರಾಮಮಂದಿರ ವಿನ್ಯಾಸ ಮಾಡುವ ಕೆಲಸವನ್ನು ಶುರು ಮಾಡಿದ್ದರು. ಇದೀಗ ಈ ಕೆಲಸ ಪೂರ್ಣವಾಗಿದ್ದು, ಅಂಗೈಯೊಳಗೆ ಪುಟ್ಟದಾದ ರಾಮಮಂದಿರವನ್ನು ಇಟ್ಟುಕೊಳ್ಳಬಹುದು. ಅವರ ಊಹೆಗೆ ರೂಪ ನೀಡಿ ಸೃಷ್ಠಿಸಿರುವ ಈ ಪುಟ್ಟ ರಾಮ ಮಂದಿರ ಎಲ್ಲರಿಗೂ ವಿಸ್ಮಯದಂತೆ ಕಂಡಿದೆ.
ಮೌನೇಶ್ ಆಚಾರ್ಯ ಅವರು ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರದ ಹತ್ತಿರ ಹರಕೆ ಸೇವೆಗಳಿಗೆ ಬೇಕಾಗುವ ವಸ್ತು ಪೂರೈಕೆಯ ಉದ್ಯಮ ನಡೆಸುತ್ತಿದ್ದಾರೆ. ಇವರು ಮೂಲತಃ ಕರಕುಶಲ ಕರ್ಮಿ. ಜೊತೆಗೆ ಸಾಹಿತ್ಯದಲ್ಲೂ ಆಸಕ್ತಿ ಹೊಂದಿದ್ದಾರೆ. ಸಾಹಿತ್ಯಗಳನ್ನು ರಚಿಸುತ್ತಾ ಯುವ ಕವಿಯಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಇವರು ರಾಮನ ಪರಂಭಕ್ತ ಹಾಗಾಗಿ ತಮ್ಮ ಕರ ಕುಶಲತೆಯಿಂದ ಈ ಚಿಕ್ಕ ರಾಮ ಮಂದಿರ ನಿರ್ಮಾಣವನ್ನು ಶುರುಮಾಡಿದ್ದರು.
ರಾಮ ಮಂದಿರದ ಶಿಲಾನ್ಯಾಸದ ಸಂದರ್ಭಕ್ಕೆ ಸರಿಯಾಗಿ ಅವರ ಕಲ್ಪನೆಯ ಮಂದಿರ ಕೂಡ ಪೂರ್ಣವಾಗಿರುವುದು ವಿಶೇಷವಾಗಿದೆ. ಬರೋಬ್ಬರಿ ಒಂದೂವರೆ ಸಾವಿರಕ್ಕೂ ಹೆಚ್ಚು ಉರಿದ ಊದು ಬತ್ತಿ ಕಡ್ಡಿಗಳನ್ನು ಉಪಯೋಗಿಸಿ ಐದು ಇಂಚು ಎತ್ತರದ ಸುಂದರವಾದ ಪುಟ್ಟ ರಾಮಮಂದಿರ ನಿರ್ಮಿಸಿದ್ದಾರೆ ಮೌನೇಶ್. ಮಂದಿರದ ಗೋಪುರ ನಾಲ್ಕು ಇಂಚು ಎತ್ತರವಿದೆ ಮತ್ತು ಮಂದಿರದ ಮೇಲ್ಗಡೆ ಸಹಿತ ಆಕರ್ಷಕ ಶೈಲಿಯಲ್ಲಿ ಇರುವುದು ನೋಡುಗರ ಮನ ಸೆಳೆಯುತ್ತದೆ. ಪ್ರತಿದಿನ ದೇವರಿಗೆ ಊದು ಬತ್ತಿ ಉರಿಸಿ ಅದರಿಂದ ಸಿಗುವ ಕಡ್ಡಿಯನ್ನು ಸಂಗ್ರಹಿಸಿ, ಅಂಗೈ ಅಗಲದ ಅತ್ಯಂತ ಚಿಕ್ಕ ರಾಮ ಮಂದಿರ ನಿರ್ಮಿಸಿರುವುದು ನಿಜಕ್ಕೂ ಅದ್ಭುತ.

Trending

To Top