ಮುಂಬೈ: ಟಾಲಿವುಡ್ ಸ್ಟಾರ್ ಬಾಹುಬಲಿ ಪ್ರಭಾಸ್ ರವರ ಸಿನೆಮಾದಲ್ಲಿ ನಟಿಸಲು ಅವಕಾಶ ಕೊಡಿಸುವುದಾಗಿ, ಪ್ರಭಾಸ್ ಹೆಸರು ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ.
ಇತ್ತೀಚಿಗೆ ಪ್ರಭಾಸ್ ಹೆಸರಿನಲ್ಲಿ ಇದೇ ರೀತಿಯಲ್ಲಿ ಮೊಸ ಮಾಡುತ್ತಿರುವ ಕೇಸ್ಗಳು ಬೆಳಕಿಗೆ ಬರುತ್ತಲೇ ಇವೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ರಾಧೆ-ಶ್ಯಾಮ್ ಚಿತ್ರದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂದು ಹೇಳಿದ ವ್ಯಕ್ತಿಯೊಬ್ಬ ಲಕ್ಷಾಂತರ ರೂಪಾಯಿಗಳನ್ನು ಅಮಾಯಕರೊಬ್ಬರಿಂದ ದೋಚಿದ್ದಾನೆ. ಮೋಸ ಮಾಡಿದ ವ್ಯಕ್ತಿ ಆನಂದ್ ಸಕ್ಬಾಲ್ ಅಲಿಯಾಸ್ ಪ್ರಿತೇಶ್ ಜೈನ್ ಎಂದು ಗುರ್ತಿಸಲಾಗಿದ್ದು, ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆರೋಪಿ ಆನಂದ್ ಸಕ್ಬಾಲ್ ತಾನು ಟಿ-ಸೀರಿಸ್ ಸಂಸ್ಥೆಯ ಕಾಸ್ಟಿಂಗ್ ಮ್ಯಾನೇಜರ್ ಎಂದು ಹೇಳಿಕೊಂಡು ರಾಧೆ-ಶ್ಯಾಮ್ ಸಿನೆಮಾದಲ್ಲಿ ಹಲವು ಪಾತ್ರಗಳಿಗಾಗಿ ಆಡಿಷನ್ ನಡೆಸುತ್ತಿದ್ದೇವೆ ಎಂದು ನಂಬಿಸಿ, ಅನೇಕ ಯುವಕ-ಯುವತಿಯರನ್ನು ಆಡಿಷನ್ಗೆ ಕರೆದು, ಅವರಲ್ಲಿ ಕೆಲವರಿಗೆ ಸಿನೆಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆಂದು ಹೇಳಿ ಹಣ ಲಪಟಾಯಿಸಿದ್ದಾನೆ. ಈ ಕುರಿತು ಒಂದು ತಿಂಗಳ ಹಿಂದೆಯೇ ದೂರು ಸಹ ದಾಖಲಾಗಿತ್ತು.
ಅಷ್ಟೇ ಅಲ್ಲದೇ ಆನಂದ್ ಸಕ್ಬಾಲ್ ಟಿ-ಸೀರಿಸ್ ಸಂಸ್ಥೆಯ ನಕಲಿ ಲೆಟರ್ಹೆಡ್ ಬಳಸಿ ನಿಮಗೆ ಪ್ರಭಾಸ್ ಸಹೋದರನ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದ್ದೇವೆ ಎಂದು ಪತ್ರಗಳನ್ನು ಕಳುಹಿಸಿ ಅವರನ್ನು ನಂಬಿಸಿ ಹಣ ಪೀಕುತ್ತಿದ್ದ. ಜೊತೆಗೆ ರಾಧೆ-ಶ್ಯಾಮ್ ಚಿತ್ರದ ಆಡಿಷನ್ ಕುರಿತು ಫೇಕ್ ಜಾಹಿರಾತನ್ನು ಸಹ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಿದ್ದ, ಇದನ್ನು ನೋಡಿ ಆನಂದ್ ಸಕ್ಬಾಲ್ ರನ್ನು ಸಂಪರ್ಕಿಸಿದ ಆಕಾಂಕ್ಷಿಗಳ ಬಳಿ ಆಡಿಷನ್ ಶುಲ್ಕದ ಹೆಸರಿನಲ್ಲೂ ಸಹ ಹಣ ಹಾಕಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.