ಬೆಂಗಳೂರು: ಬಹುನಿರೀಕ್ಷಿತ ಕಿಚ್ಚ ಸುದೀಪ್ ಅಭಿನಯದ ಬಿಗ್ ಬಜೆಟ್ ಸಿನೆಮಾ ಫ್ಯಾಂಟಮ್ ಚಿತ್ರದ ಪೋಸ್ಟರ್, ವಿಡಿಯೋ ತುಣುಕುಗಳನ್ನು ವೀಕ್ಷಣೆ ಮಾಡಿದ ತೆಲುಗು ಚಿತ್ರರಂಗದ ಖ್ಯಾತ ನಟ ನಾಗರ್ಜುನ ಮನಸಾರೆ ಹೊಗಳಿದ್ದಾರೆ. ಭಾರತ ಚಿತ್ರರಂಗದಲ್ಲಿಯೇ ಫ್ಯಾಂಟಮ್ ವಿಭಿನ್ನ ಚಲನಚಿತ್ರವಾಗಿದ್ದು, ಇದು ವಿಶ್ವ ಖ್ಯಾತಿ ಪಡೆಯಲಿದೆ ಎಂದಿದ್ದಾರೆ.
ಈಗಾಗಲೇ ಸಿನಿರಂಗದಲ್ಲಿ ಪೋಸ್ಟರ್, ವಿಡಿಯೋಗಳ ಮೂಲಕ ಭಾರಿ ಸದ್ದು ಮಾಡಿರುವ ಚಿತ್ರ ಫ್ಯಾಂಟಮ್ ಕುರಿತು ತೆಲುಗು ಬಿಗ್ಬಾಸ್ ವೇದಿಕೆಯಲ್ಲಿ ಅತಿಥಿ ನಿರೂಪಕರಾಗಿ ಬಂದಿದ್ದ ಸುದೀಪರನ್ನು ಹೊಗಳಿದ್ದಾರೆ. ನಾನು ನಿಮ್ಮ ಫ್ಯಾಂಟಮ್ ಚಿತ್ರದ ನಿರ್ದೇಶನ ಅನುಪ್ ಭಂಡಾರಿಯನ್ನು ಭೇಟಿಯಾಗಿದ್ದ ವೇಳೆ ಆತ ನನಗೆ ಸಿನೆಮಾದ ರೀಲ್ಗಳನ್ನು ತೋರಿಸಿದ, ಅದ್ಬುತವಾದ ಸಿನೆಮಾ ಚಿತ್ರೀಕರಣವಾಗಿದೆ. ಭಾರತ ಚಿತ್ರರಂಗವನ್ನು ವಿಶ್ವ ಮಟ್ಟಕ್ಕೆ ಏರಿಸಿದ್ದೀರಿ ಎಂದು ಹಾಡಿ ಹೊಗಳಿದ್ದಾರೆ.
ಇನ್ನೂ ತೆಲುಗು ಬಿಗ್ಬಾಸ್ ವೇದಿಕೆ ಮೇಲೆ ಕನ್ನಡ ಬಿಗ್ಬಾಸ್ನ ಪ್ರಖ್ಯಾತ ನಿರೂಪಕರಾದ ಸುದೀಪ್ರವರು ಅತಿಥಿ ನಿರೂಪಕರಾಗಿ ಆಗಮಿಸಿ ಕನ್ನಡ ಭಾಷೆಯಲ್ಲಿ ಮಾತನಾಡಿದ್ದು ವಿಶೇಷವಾಗಿತ್ತು. ತೆಲುಗು ಬಿಗ್ಬಾಸ್ ನ ನಿರೂಪಕ ನಾಗರ್ಜುನ ರವರೊಂದಿಗೆ ವೇದಿಕೆಯ ಮೇಲೆ ಕಾಣಿಸಿಕೊಂಡು ಬಿಗ್ಬಾಸ್ ಹೋಂ ನಲ್ಲಿರುವ ಸ್ಪರ್ಧಾಳುಗಳೊಂದಿಗೆ ಹಾಸ್ಯ ಚಟಾಕಿಗಳನ್ನು ಹಾರಿಸಿದ್ದಾರೆ. ಈಗಾಗಲೇ ಕನ್ನಡದಲ್ಲಿಯೂ ಬಿಗ್ಬಾಸ್ ರಿಯಾಲಿಟಿ ಶೋ ಪ್ರಾರಂಭವಾಗಲಿದ್ದು, ಎಲ್ಲಾ ಸಿದ್ದತೆಗಳು ನಡೆದಿದ್ದು, ಮುಂದಿನ ಜನವರಿ ತಿಂಗಳಲ್ಲಿ ಪ್ರಾರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
