ಬೆಂಗಳೂರು: ಸ್ಯಾಂಡಲ್ವುಡ್ ನಲ್ಲಿ ಕೆಜಿಎಫ್ ನಂತರ ಭಾರಿ ಸದ್ದು ಮಾಡುತ್ತಿರುವ ಚಿತ್ರವೆಂದರೇ ಅದು ಕಬ್ಜ, ಈಗಾಗಲೇ ಪೋಸ್ಟರ್ಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿರುವ ಕಬ್ಜ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸಲಿದ್ದಾರೆಂಬ ಸುದ್ದಿ ಇದೀಗ ಹಲ್ ಚಲ್ ಸೃಷ್ಟಿ ಮಾಡಿದೆ.
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಆರ್.ಚಂದ್ರು ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಕಬ್ಜ ಚಿತ್ರದ ಬಹುದೊಡ್ಡ ಸರ್ಪ್ರೈಸ್ ಜನವರಿ ೧೪ ರಂದು ನೀಡಲಾಗುತ್ತದೆ ಎಂಬ ಮಾಹಿತಿ ಚಿತ್ರತಂಡ ಘೋಷಣೆ ಮಾಡಿತ್ತು. ಈ ಕುರಿತು ಸ್ಯಾಂಡಲ್ವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭವಾಗಿತ್ತು. ಚಿತ್ರದ ನಾಯಕಿಯ ಹೆಸರನ್ನು ಬಹಿರಂಗ ಮಾಡುತ್ತಾರಾ? ಅಥವಾ ಚಿತ್ರದ ಪೋಸ್ಟರ್ ರಿಲೀಸ್ ಮಾಡುತ್ತಾರಾ ಎಂಬುದರ ಬಗ್ಗೆ ಸಾಕಷ್ಟು ಮಟ್ಟಿಗೆ ಬಿಸಿ ಬಿಸಿ ಚರ್ಚೆ ಆರಂಭವಾಗಿತ್ತು. ಅದರ ಸಾಲಿಗೆ ಉಪೇಂದ್ರ ಜೊತೆ ಕಿಚ್ಚ ಸುದೀಪ್ ಸಹ ಬಣ್ಣ ಹಚ್ಚಲಿದ್ದಾರೆಂಬ ಚರ್ಚೆ ಸಹ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.
ಇನ್ನೂ ಬಿಗ್ ಬಜೆಟ್ ಸಿನೆಮಾ ಸಾಲಿನಲ್ಲಿರುವ ಕಬ್ಜ ಚಿತ್ರ ನಿರ್ದೇಶಕ ಚಂದ್ರು ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಭಾರಿ ಬಜೆಟ್ನ ಚಿತ್ರವಾಗಿದೆ. ಚಿತ್ರಕ್ಕೆ ಇನ್ನೂ ಹೈಪ್ ಕ್ರಿಯೇಟ್ ಮಾಡುವ ಸಲುವಾಗಿ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿಂದೆ ಉಪೇಂದ್ರ ಹಾಗೂ ಸುದೀಪ್ ಇಬ್ಬರ ಕಾಂಬಿನೇಷನ್ ನಲ್ಲಿ ಮುಕುಂದಾ ಮುರಾರಿ ಚಿತ್ರ ತೆರೆಗೆ ಬಂದಿದ್ದು, ಶ್ರೀಕೃಷ್ಣನ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರ ಸಹ ಯಶಸ್ವಿಯಾಗಿತ್ತು. ಇದೀಗ ಕಬ್ಜ ಚಿತ್ರದ ಮೂಲಕ ಸ್ಟಾರ್ ನಟರು ಒಂದಾಗಲಿದ್ದಾರೆ ಎನ್ನಲಾಗುತ್ತಿದೆ.
