ಬೆಂಗಳೂರು: ತೆಲುಗು ಚಿತ್ರರಂಗದ ನಟ ವಿಜಯ ರಂಗರಾಜು ಸಾಹಸಸಿಂಹ ವಿಷ್ಣುವರ್ಧನ್ ಅವರ ನಡತೆಯ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿದ್ದು, ಅವರ ಈ ನಡೆಯನ್ನು ಖಂಡಿಸಿ ಕನ್ನಡ ಚಿತ್ರರಂಗದ ನಟರೆಲ್ಲಾ ತಿರುಗಿ ಬಿದಿದ್ದಾರೆ.
ನಟ ವಿಷ್ಣುವರ್ಧನ್ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿರುವಂತಹ ತೆಲುಗು ನಟ ವಿಜಯ್ ರಂಗರಾಜು ಕೂಡಲೇ ಕ್ಷಮೆ ಕೇಳಬೇಕು. ನಮ್ಮ ನಾಡಿನ ಮೇರು ನಟರಲ್ಲಿ ಒಬ್ಬರಾದ ವಿಷ್ಣು ಸರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ವಿಜಯ ರಂಗರಾಜು ಕೂಡಲೇ ಕ್ಷಮೆಯಾಚಿಸಿ, ತನ್ನ ಮಾತುಗಳನ್ನು ಹಿಂಪಡೆಯಬೇಕು. ಭಾರತೀಯ ಚಿತ್ರರಂಗ ನಮ್ಮ ಮನೆಯಾಗಿದ್ದು, ಇಲ್ಲಿ ಎಲ್ಲಾ ಕಲಾವಿದರು ಒಂದೇ ಕುಟಂಬಕ್ಕೆ ಸೇರಿದವರಾಗಿದ್ದಾರೆ. ಕಲೆಗೆ ಗೌರವಿಸುವುದು ಕಲಾವಿದರ ಮೊದಲ ಕರ್ತವ್ಯ. ಮೊದಲು ಮಾನವನಾಗು ಎಂದು ಟ್ವೀಟ್ ಮಾಡುವ ಮೂಲಕ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನೂ ತೆಲುಗು ನಟ ವಿಜಯ್ ರಂಗರಾಜು ವಿರುದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ಗುಡುಗಿದ್ದಾರೆ. ವಿಜಯ ರಂಗರಾಜು ರವರೇ ವಿಷ್ಣು ಸರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದೀರಿ, ಒಬ್ಬ ವ್ಯಕ್ತಿ ಬಗ್ಗೆ ಏನು ಮಾತನಾಡಬೇಕೆಂದು ನಿಮಗೆ ಬಿಟ್ಟ ವಿಚಾರ, ಆದರೆ ಆ ವ್ಯಕ್ತಿ ಬದುಕ್ಕಿದ್ದಾಗ ಮಾತನಾಡಿದ್ರೆ ಒಂದು ಸ್ವಲ್ಪನಾದರೂ ಗಂಡಸ್ತನ ಇರುತ್ತೆ ಎಂಬ ನಂಬಿಕೆ ನನ್ನದು ಎಂದು ಆಕ್ರೋಷ ವ್ಯಕ್ತಪಡಿಸಿದ್ದು, ವಿಷ್ಣು ಪರ ನಾವಿದ್ದೇವೆ. ನಾನೊಬ್ಬ ನಟನಾಗಿ ಮತ್ತು ವಿಷ್ಣು ಅವರ ಅಪ್ಪಟ ಅಭಿಮಾನಿಯಾಗಿ ಹೇಳುತ್ತಿದ್ದೇನೆ, ವಿಷ್ಣು ಅವರು ಇಲ್ಲದ ಸಮಯದಲ್ಲಿ ಈ ರೀತಿಯ ಹೇಳಿಕೆ ನೀಡುವುದು ಬಹಳ ದೊಡ್ಡ ತಪ್ಪಾಗಿದೆ. ಎಲ್ಲಾ ಇಂಡಸ್ಟ್ರಿಯವರು ಬಾಂದವ್ಯದಿಂದ ನಡೆಯುತ್ತಿರಬೇಕಾದರೇ ನಿಮ್ಮಂತವರಿಂದ ಇಂಡಸ್ಟ್ರಿ ಚೂರು ಚೂರಾಗಬಾರದು. ನಾವು ವಾರ್ನ್ ಮಾಡುವ ಮಟ್ಟಕ್ಕೆ ಹೋಗಬೇಡಿ, ನೀವು ಆಡಿರುವ ಮಾತುಗಳನ್ನು ವಾಪಸ್ಸು ತೆಗೆದುಕೊಳ್ಳಿ ಎಂದು ಖಡಕ್ ಸಂದೇಶ ನೀಡಿದ್ದಾರೆ.
ಈಗಾಗಲೇ ತೆಲುಗು ನಟನ ಹೇಳಿಕೆಯನ್ನು ನವರಸ ನಾಯಕ ಜಗ್ಗೇಶ್, ಅನಿರುದ್ದ್, ಪ್ರಥಮ್ ಸೇರಿದಂತೆ ವಿಷ್ಣು ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಖಂಡಿಸಿ, ವಿಜಯ ರಂಗರಾಜ್ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.
