ಬೆಂಗಳೂರು: ಬಾಲಿವುಡ್ನ ಖ್ಯಾತ ನಟಿ ಜೂಹಿ ಚಾವ್ಲಾ ಇತ್ತಿಚಿಗಷ್ಟೆ ಮೈಸೂರಿನ ಹಲವು ಭಾಗಗಳಲ್ಲಿ ಪ್ರವಾಸ ಕೈಗೊಂಡು ಅಲ್ಲಿನ ಪರಿಸರ ಸೌಂದರ್ಯಕ್ಕೆ ಮನಸೋತಿದ್ದಾರೆ. ಜೊತೆಗೆ ಈ ಕುರಿತು ಸೋಷಿಯಲ್ ಮಿಡೀಯಾದಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ.
ಕಳೆದ ಫೆ.16 ರಂದು ಕಬಿನಿ, ನಾಗರಹೊಳೆ, ಹೆಚ್.ಡಿ.ಕೋಟೆ ಸೇರಿದಂತೆ ಮೈಸೂರು ಭಾಗದ ಸುತ್ತಮುತ್ತಲಿನ ಪ್ರದೇಶಕ್ಕೆ ತಮ್ಮ ಕುಟುಂಬದವರೊಂದಿಗೆ ಭೇಟಿ ನೀಡಿದ್ದು, ಅಲ್ಲಿನ ಪರಿಸರ ತಾಣಗಳನ್ನು ವೀಕ್ಷಿಸಿ ಸಂತಸಗೊಂಡಿದ್ದಾರೆ. ನಂತರ ಕಾರಾಪುರ ಎಂಬಲ್ಲಿರುವ ಜಂಗಲ್ ಲಾಡ್ಜ್ ಎಂಬಲ್ಲಿ ತಂಗಿದ್ದು, ನಾಗರಹೊಳೆ ಸುತ್ತಮುತ್ತಲಿನ ಸುಂದರ ತಾಣಗಳನ್ನು ವೀಕ್ಷಣೆ ಮಾಡಿ ಪರಿಸರ ಸೌಂದರ್ಯವನ್ನು ಹೊಗಳಿದ್ದಾರೆ.
2 ದಿನಗಳ ಕಾಲ ಮೈಸೂರಿನ ಹಲವು ಭಾಗಗಳಲ್ಲಿ ಸಂಚರಿಸಿರುವ ಜೂಹಿ ಚಾವ್ಲಾ ಕುಟುಂಬ ಕಾಡಿನಲ್ಲಿರುವ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದು, ಫೆ.೧೮ ರಂದು ಮುಂಬೈಗೆ ತೆರಳಿದ್ದಾರೆ. ಈ ರೆಸಾರ್ಟ್ನಲ್ಲಿನ ಅತೀಥ್ಯವನ್ನು ಮನಸಾರೆ ಹೊಗಳಿದ್ದು, ಅಲ್ಲಿನ ಊಟ ಬಹು ರುಚಿಕರವಾಗಿತ್ತು ಎಂದಿದ್ದಾರಂತೆ. ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಜೂಹಿ ಚಾವ್ಲಾ ರವರು ಪ್ರವಾಸದ ನೆನಪಿಗಾಗಿ ಒಂದು ಗಿಡವನ್ನು ನೆಟ್ಟು, ಆ ವಿಡಿಯೋವನ್ನು ಸೋಷಿಯಲ್ ಮಿಡೀಯಾದಲ್ಲಿ ಹಂಚಿಕೊಂಡಿದ್ದಾರೆ.
ಅಂದಹಾಗೆ ಕೆಲವು ದಿನಗಳ ಹಿಂದೆಯೂ ಸಹ ನಟ ಅಕ್ಷಯ್ ಕುಮಾರ್ ಮೈಸೂರಿನ ಹೆಚ್.ಡಿ.ಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು ಅಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮನಸೋತಿದ್ದರು. ಇದೀಗ ಜೂಹಿ ಚಾವ್ಲಾ ಮೈಸೂರಿನ ಸುತ್ತಮುತ್ತಲಿನ ಪ್ರಾಕೃತಿಕ ಸೊಬಗಿಗೆ ಮನಸೋತಿರುವುದು ಅಲ್ಲಿನ ಜನತೆಗೆ ಸಂತಸದ ವಿಚಾರವಾಗಿದೆ.
