Film News

ಫ್ಯಾಂಟಮ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ ಬಾಲಿವುಡ್ ಬ್ಯೂಟಿ!

ಬೆಂಗಳೂರು: ಈಗಾಗಲೇ ಕನ್ನಡ ಸಿನಿರಂಗದಲ್ಲಿ ಸಖತ್ ಕ್ರೇಜ್ ಹುಟ್ಟಿಸಿರುವ ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ರವರೊಂದಿಗೆ ಬಾಲಿವುಡ್ ನ ಬ್ಯೂಟಿ ಜಾಕ್ವೇಲಿನ್ ಫರ್ನಾಂಡಿಸ್ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಈಗಾಗಲೇ ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿರುವ ಫ್ಯಾಂಟಮ್ ಚಿತ್ರ, ಡಿಸೆಂಬರ್ ಪ್ರಾರಂಭದಿಂದ ಕೇರಳದಲ್ಲಿ ಚಿತ್ರೀಕರಣ ಆರಂಭಿಸಿದೆ. ಇನ್ನೂ ಈ ಚಿತ್ರದಲ್ಲಿನ ಪ್ರಮುಖ ಹಾಡೊಂದಕ್ಕೆ ಖ್ಯಾತ ನಟಯನ್ನು ಚಿತ್ರತಂಡ ಹುಡುಕುತ್ತಿತ್ತು. ಇದರ ಭಾಗವಾಗಿಯೇ ಬಾಲಿವುಡ್ ಸ್ಟಾರ್ ನಟಿ ಜಾಕ್ವೇಲಿನ್ ರವರನ್ನು ಚಿತ್ರತಂಡ ಭೇಟಿ ಮಾಡಿದೆ. ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿರುವ ಚಿತ್ರತಂಡ ಅವರ ಒಪ್ಪಿಗೆಗಾಗಿ ಕಾಯುತ್ತಿದೆ ಎನ್ನಲಾಗಿದೆ. ಜಾಕ್ವೆಲಿನ್ ಹಾಡೊಂದರ ಜೊತೆಗೆ ಒಂದೆರೆಡು ಸನ್ನಿವೇಶಗಳಲ್ಲೂ ಕೂಡ ನಟಿಸಲಿದ್ದಾರಂತೆ. ಈ ಎಲ್ಲಾ ಪ್ರಕ್ರಿಯೆಗಳು ಅಂದುಕೊಂಡಂತೆ ಆದರೆ ಏಪ್ರಿಲ್ ಮಾಹೆಯಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ ಎನ್ನಲಾಗಿದೆ.

ಇನ್ನೂ ಮೊದಲಿಗೆ ಬಾಲಿವುಡ್ ನ ಮತ್ತೋರ್ವ ನಟಿ ಕತ್ರಿನಾ ಕೈಫ್ ರವರು ಈ ಹಾಡಿನಲ್ಲಿ ನೃತ್ಯ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಬೇರೆ ಚಿತ್ರಗಳಲ್ಲಿ ಬ್ಯುಸಿ ಇದ್ದ ಕಾರಣ ಮತ್ತೋರ್ವ ನಟಿ ನೋರಾ ಫತೇಹಿ ಅವರನ್ನು ಆಯ್ಕೆ ಮಾಡುವ ಸಿದ್ದತೆಯಲ್ಲಿತ್ತು ಚಿತ್ರತಂಡ. ಕತ್ರಿನಾ ರವರ ಡೇಟ್ ಸಿಕ್ಕಿಲ್ಲ ಅಂದ್ರೆ ನೋರಾ ಫತೇಹಿ ಬರಲಿದ್ದಾರೆ ಎಂದು ನಿರ್ಮಾಪಕ ಜಾಖ್ ಮಂಜು ಮಾಹಿತಿ ನೀಡಿದ್ದರು. ಇದೀಗ ಬಾಲಿವುಡ್ ಬ್ಯೂಟಿ ಜಾಕ್ವೇಲಿನ್ ರವರೊಂದಿಗೆ ಮಾತುಕತೆ ನಡೆಸುತ್ತಿದೆ. ಇನ್ನೂ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇನ್ನೂ ಕಿಚ್ಚ ಸುದೀಪ್ ರವರಿಗೆ ಗಿಫ್ಟ್ ಕೊಡುವ ರೀತಿಯಲ್ಲಿ ಫ್ಯಾಂಟಮ್ ಚಿತ್ರದ ಟೀಸರ್ ಅನ್ನು ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ ಚಿತ್ರತಂಡ. ಇನ್ನೂ ಟೀಸರ್ ರಿಲೀಸ್ ಗೆ ಅನುಮತಿ ಸಹ ದೊರೆತಿದೆ. ಯಾರು ಯಾರು ಭಾಗವಹಿಸಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ ಎನ್ನಲಾಗಿದೆ.

Trending

To Top